ಭಾಜಪಕ್ಕೆ ಗುಡ್ ಬೈ ಹೇಳಿದ ಮಾಜಿ ಸಂಸದ..!!

ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರು ಭಾಜಪಕ್ಕೆ ಗುಡ್ ಬೈ ಹೇಳಿದ್ದಾರೆ. ಫ್ಯಾಕ್ಸ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಅವರು ರಾಜೀನಾಮೆ ರವಾನಿಸಿದ್ದಾರೆ. ಸಿ.ಎಚ್. ವಿಜಯಶಂಕರ್ ಮನವೊಲಿಸಲು ಬಿಜೆಪಿ ನಾಯಕರು ಈ ಮೊದಲು ಸಾಕಷ್ಟು ಬಾರಿ ಮುಂದಾಗಿದ್ದರೆನ್ನಲಾಗಿದೆ. ಆದರೆ, ಪಕ್ಷವನ್ನು ಬಿಡಲು ವಿಜಯಶಂಕರ್ ದೃಢ ತಿರ್ಮಾನ ಮಾಡಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ನಿರಾಕರಣೆ, ನಿರ್ಲಕ್ಷ್ಯ ಮೊದಲಾದವುಗಳಿಂದ ಅವರು ಬೇಸತ್ತಿದ್ದರು. ಪಕ್ಷ ತೊರಯಲು ಇದೇ ಕಾರಣ ಎನ್ನಲಾಗಿದೆ.
ಮಾಜಿ ಸಚಿವರೂ ಆಗಿರುವ 61 ವರ್ಷದ ಸಿಎಚ್ ವಿಜಯಶಂಕರ್ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಚುನಾಯಿತರಾಗಿದ್ದರು. ಮೈಸೂರು ರಾಜ ಶ್ರೀಕಂಠದತ್ತ ಒಡೆಯರ್ ಅವರನ್ನೇ ಸೋಲಿಸಿ ಅಚ್ಚರಿ ಮೂಡಿಸಿದ್ದವರು. 2014ರಲ್ಲಿ ಹಾಸನದಲ್ಲಿ ಎಚ್.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋಲಪ್ಪಿದರು. ರಾಜ್ಯ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿಯೂ ವಿಜಯಶಂಕರ್ ಸಕ್ರಿಯರಾಗಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಮೈಸೂರಿನ ಪಿರಿಯಾಪಟ್ಟಣ ಕ್ಷೇತ್ರದಿಂದ ಭಾರತಿಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದರೆ, ಪಕ್ಷದ ಟಿಕೆಟ್ ಸಿಗಲಿಲ್ಲ. ಮತ್ತು, ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಿಸಲಾಗುತ್ತಿದೆ ಎಂಬ ಕೊರಗು ಇತ್ತೀಚೆಗೆ ವಿಜಯಶಂಕರ್ ಅವರನ್ನು ಕಾಡಿತ್ತು. ಇದರಿಂದ ಬೇಸತ್ತ ಅವರು ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಹೋಗುವ ಮನಸ್ಸು ಮಾಡಿದ್ದಾರೆನ್ನುವುದು ತಿಳಿದು ಬಂದಿಲ್ಲ.