ಅಂಕಣಪ್ರವಾಸ

ರಾಷ್ಟ್ರಕಾರ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡುವ ಅಕ್ಷರಧಾಮ..!!

ಕಳೆದ ತಿಂಗಳು ದೆಹಲಿ ಪ್ರವಾಸದ ಅನುಭವ ಕಥನ ನಿಮಗಾಗಿ …

“ರಾಷ್ಟ್ರಕಾರ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡುವ ಅಕ್ಷರಧಾಮ”

“ಭಾರತದ ಹಿರಿಮೆ ಗರಿಮೆಗಳ ಸಂಗಮ ಸಮುಚ್ಛಯ ಸಾಗರ ಅಕ್ಷರಧಾಮ”

ಕಳೆದ ತಿಂಗಳು ನಿರೀಕ್ಷಿತ ಪ್ರವಾಸದ ನಿಮಿತ್ತ ದೇಶದ ರಾಜಧಾನಿ ನವದೆಹಲಿಗೆ ಹೋಗಿದ್ದೆ. ಹಿರಿಯರು ಹೇಳಿದ್ದು ವರ್ಗಕ್ಕೆ ಕಾಲಾವಕಾಶವಿದೆ ನವದೆಹಲಿಯಲ್ಲಿರುವ ಅಕ್ಷರಧಾಮ ನೋಡಿ ಬನ್ನಿ ನನ್ನ ಕಲ್ಪನೆ ಅಕ್ಷರಧಾಮ ಒಂದು ಗ್ಯಾಲರಿ ಇರಬಹುದು ಅಂದುಕೊಂಡಿದ್ದೆ.

ಅಕ್ಷರಧಾಮಕ್ಕೆ ಭೇಟಿ ನೀಡಿದ ಬಳಿಕ ಪರಮಾಶ್ಚರ್ಯ, ಅತ್ಯದ್ಬುತ ಶಿಲ್ಪಕಲೆಗಳು, ಝಗಮಗಿಸುವ ವಿವಿಧ ವರ್ಣದ ಲೈಟ್ಗಳು, ಸ್ವಚ್ಛ ಸುಂದರ ಪರಿಸರದ ನಡುವೆ ವರ್ಣರಂಜಿಯ ಕಾರಂಜಿ ಎಲ್ಲವೂ ವಿಕ್ಷಕರ ಮನಸ್ಸಿನ ಆತ್ಮವಿಶ್ವಾಸ, ದೇಶಭಕ್ತಿ, ದೈವಭಕ್ತಿಗೆ ಪ್ರತ್ಯಕ್ಷ ಮೂರ್ತರೂಪವೇ ಅಕ್ಷರಧಾಮವಾಗಿದೆ.
ಅದರ ಸಂಕ್ಷಿಪ್ತ ಪರಿಚಯದ ಒಂದಷ್ಟು ಮಾಹಿತಿ ನಿಮಗಾಗಿ..

ನವದೆಹಲಿಯಲ್ಲಿ ವಿಶಾಲವಾದ 100 ಎಕರೆ ವಿಸ್ತೀರ್ಣದಲ್ಲಿ 5 ವರ್ಷಗಳಲ್ಲಿ ಅಕ್ಷರಧಾಮ ನಿರ್ಮಾಣವಾಗಿದೆ. ಭಾರತೀಯ ಸಂಸ್ಕೃತಿಯ ಜ್ಯೋತಿರ್ಧಾರಿ ಭಗವಂತ ಸ್ವಾಮಿ‌ನಾರಾಯಣರ (1781 ರಿಂದ 1830) ಸ್ಮರಣೆಗಾಗಿ ಸಂತ ವಿಭೂತಿ ಪ್ರಮುಖ ಸ್ವಾಮಿ ಮಹಾರಾಜರ ಇಚ್ಛಾಶಕ್ತಿಯ ಪ್ರತಿಬಿಂಬವಾಗಿ ಅಕ್ಷರಧಾಮ ಭಾರತೀಯ ಸಂಸ್ಕ್ರತಿ ಪ್ರತಿನಿಧಿಸುತ್ತಿದೆ. ಶಾಂತಿ, ಸೌಂದರ್ಯ, ಮತ್ತು ಭವ್ಯತೆಗಳಿಂದ ಕೂಡಿದ ಭಕ್ತಿ ಸಾಗರವಾಗಿದೆ.

1 )ಅಕ್ಷರಧಾಮ ಒಳಾಂಗಣದಲ್ಲಿ ಶಿಲ್ಪಕಲೆಯನ್ನೊಳಗೊಂಡ ಬೃಹದಾಕಾರವಾದ 10 ದ್ವಾರಗಳಿವೆ. ಸಮಗ್ರ ಬ್ರಹ್ಮಾಂಡದಲ್ಲಿರುವ ಒಳ್ಳೆಯ ಅಂಶಗಳ ಜತೆಗೆ ದಿವ್ಯತೆಯು ಅಕ್ಷರಧಾಮದ ಕಡೆಗೆ ಪ್ರವಹಿಸಲಿ, ಅಲ್ಲಿಂದ ಶುಭ ತತ್ವಗಳು ಎಲ್ಲೆಡೆಯೂ ಮಂಗಳಕರವಾಗಿ ವ್ಯಾಪಿಸಲಿ ಎಂಬ ಸಂದೇಶವನ್ನು ಸಾರುತ್ತವೆ.

2) ಭಗವಂತನ ಬಗೆಗಿನ ಶುದ್ಧವಾದ ಪ್ರೇಮದ ಸಂಕೇತವಾದ ಭಕ್ತಿದ್ವಾರವು ಭಕ್ತಿ ಮತ್ತು ಉಪಾಸನೆಗಳ 208 ಸ್ವರೂಪಗಳಿಂದ ಅಡಕವಾಗಿದೆ. ಅಕ್ಷರಧಾಮದ ಸ್ವಾಗತಕ್ಕೆ ನಿರ್ಮಿತವಾದ (ರಾಷ್ಟ್ರಪಕ್ಷಿ ನವಿಲು) ಮಯೂರ ದ್ವಾರದಲ್ಲಿ ಮಯೂರ ತೋರಣದ ಜತೆಗೆ 869 ನವಿಲುಗಳ ನೃತ್ಯದ ಕಲಾ ಮಂಡಿತ ಸ್ತಂಭ ಎಲ್ಲವೂ ವರ್ಣಿಸಲಸಾಧ್ಯ ಎನ್ನುವಂತಿದೆ.

3)ಎರಡು ಮಯೂರ ದ್ವಾರಗಳ ಮಧ್ಯದಲ್ಲಿ 16 ಚಿಹ್ನೆಗಳಿಂದ, ಬಿಳಿ ಅಮೃತಶಿಲೆಯಿಂದ ನಿರ್ಮಿತವಾದ ಶ್ರೀಹರಿ ಚರಣಾರವಿಂದಗಳಿಗೆ 4 ಶಂಖಗಳಿಂದ ಜಲಧಾರೆ ಅಭಿಷೇಕದ ದೃಶ್ಯವು ನೋಡುಗರನ್ನು ಮೂಕವಿಸ್ಮಿತವನ್ನಾಗಿಸುತ್ತದೆ. 4) ವಿಶಾಲ ಪರಿಸರ ಕೇಂದ್ರದಲ್ಲಿ ಅಕ್ಷರಧಾಮ ಮಹಾಲಯ ತಲೆ ಎತ್ತಿದ್ದು, ಗುಲಾಬಿ ಕಲ್ಲು, ಬಿಳಿ ಅಮೃತಶಿಲೆಗಳಿಂದ ಸಂಯೋಜಿತಗೊಂಡಿದ್ದು, 234 ಕಲಾ ಮಂಡಿತ ಸ್ತಂಭಗಳು, ಕಲೆಯಿಂದ ಆವೃತವಾದ ಗೋಪುರಗಳ 9 ಮಂಟಪಗಳು, 20 ಚತುಷ್ಕೋಣಾಕಾರದ ಶಿಖರಗಳು, ಅಂದಾಜು 20 ಸಾವಿರಕ್ಕೂ ಹೆಚ್ಚು ಶಿಲ್ಪಕಲಾಕೃತಿಗಳು ನಯನಮನೋಹರವಾಗಿವೆ. ಎತ್ತರಕ್ಕೆ 141 ಅಡಿ, 316 ಅಡಿ ಅಗಲ ಮತ್ತು 356 ಅಡಿ ಉದ್ದದ ಲೋಹ ಉಪಯೋಗವಿಲ್ಲದ ಮಹಾಲಯ ನೋಡುವುದೇ ಒಂದು ಸೌಭಾಗ್ಯವೆನಿಸುತ್ತದೆ.
5)ಪ್ರಾಚೀನ ಭಾರತದ ನಾಗರ ಶೈಲಿಯಲ್ಲಿ ರಚಿತವಾದ ಪ್ರಾಕಾರ ಗೋಡೆ, ಬೋಧಕಥೆ-ಜನಪದ ಕಥೆಗಳು-ಪೌರಾಣಿಕ ಹಿನ್ನೆಲೆಯುಳ್ಳ 80 ದೃಶ್ಯಗಳು ಕಲ್ಲಿನಲ್ಲಿ ಕೆತ್ತಲಾಗಿದೆ. ಜೀವಂತ ಶಿಲ್ಪದ 148 (ಗಜಗಾಂಭೀರ್ಯ ನಡಿಗೆ) ಗಜೇಂದ್ರಪೀಠವು ವಿಕ್ಷಕರನ್ನು ತನ್ಮಯಗೊಳಿಸುತ್ತದೆ.

6) ಸ್ವಾಮಿ ನಾರಾಯಣರ ಜೀವನ ಪ್ರಸಂಗಗಳ ಪ್ರಸ್ತುತಿಯಾಗಿ 50 ನಿಮಿಷದ (ಚಿತ್ರ) ದೃಶ್ಯವು ಶ್ರದ್ಧೆ, ಸತ್ಯ, ಅಹಿಂಸೆ, ಕರುಣೆ, ಶಾನ್ತಿ ಇತ್ಯಾದಿ ಸನಾತನ ಮೌಲ್ಯಗಳನ್ನು ಮನದಟ್ಟು ಮಾಡಿಕೊಡುತ್ತದೆ. ಸತ್ಯಘಟನೆಗಳಿಂದ ಆವರಿಸಿರುವ ಮಹಾಕಾಯ ಚಲನಚಿತ್ರದಲ್ಲಿ ಭಾರತದ ತೀರ್ಥ ಸ್ಥಳಗಳು, ಸಾಂಸ್ಕೃತಿಕ ವೈಭವ, ನಮ್ಮ ಪರಂಪರೆಯ ಜತೆಗೆ ವಿಶ್ವಕ್ಕೆ ಭಾರತದ ಕೊಡುಗೆಯ ಪರಿಚಯದ ಜತೆಗೆ ಮಾರ್ಗದರ್ಶನ ನೀಡುತ್ತದೆ.

7) ಮಂದ ಬೆಳಕಿನಲ್ಲಿ ಕಂಡ ಅರುಣೋದಯದಂತಿದೆ ನೌಕಾವಿಹಾರ. ಭಾರತದ 10 ಸಾವಿರ ವರ್ಷಗಳ ಸಂಸ್ಕೃತಿ, ಸಾಧನೆಗಳ ಸಮ್ಮಿಶ್ರಣವೇ ಇಲ್ಲಿದೆ. 800 ಶಿಲ್ಪಗಳಿಂದ ಹಾಗೂ ಕೆಲವು ಸಂಶೋಧನ ಪೂರ್ವಕವಾದ ಸರಸ್ವತಿ ನದಿ ದಡದಲ್ಲಿ ಅರಳಿ ನಿಂತ ಗ್ರಾಮೀಣ ಜೀವನ ಶೈಲಿ, ಪ್ರಾಚೀನ ಭಾರತದ ಸಾಧನೆಗಳು, ಸಹಜೀವನ ಪದ್ಧತಿ, ವಿಶ್ವದ ಸರ್ವಶ್ರೇಷ್ಠ ವಿದ್ಯಾಪೀಠಗಳಾದ ನಳಂದಾ, ತಕ್ಷಶಿಲೆ, ನಾಗಾರ್ಜುನ ಪ್ರಯೋಗ ಶಾಲೆ, ಸುಶೃತ ಆಸ್ಪತ್ರೆ ಇತ್ಯಾದಿ ದೇಶಭಕ್ತಿಯ ಸಿದ್ಧಾಂತಗಳಾಗಿ ಹೊರಹೊಮ್ಮಿವೆ. ಭಾರತದ ಭವ್ಯ ಇತಿಹಾಸದ ನೈಜ ದರ್ಶನಗಳ ಪ್ರದರ್ಶನವಿದೆ.

8)ಕೆಂಪು ಕಲ್ಲುಗಳಿಂದ ನಿರ್ಮಿತ ಯಜ್ಞ ಪುರುಷ ಕುಂಡ, ಅದರ ಮಧ್ಯದಲ್ಲಿ ಕಮಲಾಕಾರದ ಜಲಕುಂಡವು ಧಾಮದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಜಲ, ಜ್ಯೋತಿ, ಜೀವನಚಕ್ರಗಳ ಅದ್ಭುತ ಸಂಯೋಜನೆಯ ಸಂಗೀತ ಕಾರಂಜಿಯು ಸೃಷ್ಟಿಯ ಸೃಜನೆ, ಪೋಷಣೆ, ಸಂಹಾರ ಪ್ರಕ್ರೀಯೆಗಳ ನಿದರ್ಶನವು ಮನಸಿನಾಳದಲ್ಲಿ ಅಚ್ಚಳಿಯದ ಮುದ್ರೆಯಾಗುವಂತಿದೆ. ಕುಂಡದ ಎದುರಿಗಿರುವ 27 ಅಡಿ ಎತ್ತರದ ಬಾಲಯೋಗಿ ನೀಲಕಂಠ ಬ್ರಹ್ಮಚಾರಿಯ ಮನೋಹಾರಿ ಧಾತು ಶಿಲ್ಪವು ವ್ಯಕ್ತಿಯ ವಿಕಸನಕ್ಕೆ ಉನ್ನತ ಪ್ರೇರಣೆ ನೀಡುತ್ತದೆ.

9)ದೇವಸ್ಥಾನದ ಮಧ್ಯಭಾಗದಲ್ಲಿ ಶ್ರೀ ಲಕ್ಷ್ಮೀನಾರಾಯಣ, ಶ್ರೀಸೀತಾರಾಮಚಂದ್ರ, ರಾಧಾಕೃಷ್ಣ ಮತ್ತು ಶಿವಪಾರ್ವತಿಯರ ಅಮೃತಶಿಲೆ ಮೂರ್ತಿಗಳಿದ್ದು ಭಕ್ತವೃಂದಕ್ಕೆ ಆಶೀರ್ವಾದ ನೀಡುವಂತಿದೆ. ವೈದಿಕ ಕಾಲದಿಂದ ಭಾರತದಲ್ಲಿ ಪ್ರಚಲಿತವಾದ ಜಲತೀರ್ಥಗಳ ಸಂಕೇತವಾಗಿ ನಾರಾಯಣ ಸರೋವರ ರಚನೆಯಾಗಿದ್ದು, 151 ತೀರ್ಥ ಮತ್ತು ನದಿಗಳ ಗಂಗಾಭೀಷೇಕದಿಂದ ಪಾವಣ ತೀರ್ಥವಾಗಿ ಕಂಗೊಳಿಸಿದೆ.
ಜತೆಗೆ ಅಭಿಷೇಕ ಮಂಟಪ, ಪ್ರದಕ್ಷಿಣೆ ಪ್ರಾಕಾರವು ಕೆಂಪು ಕಲ್ಲಿನಿಂದ ನಿರ್ಮಿತವಾಗಿದ್ದು, 151 ಚತುಷ್ಕೋಣ ಶಿಖರಗಳು, 1152 ಸ್ತಂಭಗಳು, ಸುಂದರವಾದ 145 ಕಿಟಕಿಗಳಿಂದ ರಚಿತವಾಗಿದ್ದು ಎರಡು ಅಂತಸ್ತಿನ ಕಟ್ಟಡವು ಅಕ್ಷರಧಾಮದ ನಾಲ್ಕು ದಿಕ್ಕುಗಳಲ್ಲಿ ಹೂವಿನಮಾಲೆಯಂತೆ ಸುಶೋಭಿತವಾಗಿದೆ.

10) ವಿಶ್ವದ ಮಹಾಪುರುಷರು ಮತ್ತು ಧರ್ಮಶಾಸ್ತ್ರಗಳು ಸಕಲ ಜೀವಿಗಳ ಸಂರಕ್ಷಣೆಯ ಪ್ರತೀಕವಾಗಿ ಆತ್ಮವಿಶ್ವಾಸ ಹೆಚ್ಚಿಸುವ ಶೃದ್ಧಾಕೇಂದ್ರವಾಗಿ “ಯೋಗಿ ಹೃದಯ ಅಷ್ಟದಳ ಕಮಲವಿದೆ. ಅಜಂತಾದ ಅದ್ಭುತ ಕಲಾಸೃಷ್ಟಿಯ ಸಂಗಮದಲ್ಲಿ ಪ್ರೇಮವತಿ ಭೋಜನ ಶಾಲೆ, ವಿವಿಧ ಭಾಷೆಗಳಲ್ಲಿ ಪ್ರಕಟವಾದ ದೈವಿಭಕ್ತಿ, ದೇಶಭಕ್ತಿ, ಆಧ್ಯಾತ್ಮ, ವಿಜ್ಞಾನ, ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಕ್ಷರಧಾಮ ಪುಸ್ತಕ ಮಾರಾಟ ಕೇಂದ್ರ ಒಳಗೊಂಡಿದೆ.

11) ಅಕ್ಷರಧಾಮ ಮುಂದೆ 22 ಎಕರೆ ವಿಶಾಲವಾದ ಜಾಗೆಯಲ್ಲಿ ಹಸಿರು ಹುಲ್ಲಿನ ಹಾಸಿಗೆ, ಎರಿಳಿತದಿಂದ ಕೂಡಿರುವ ವಿವಿಧ ಬಗೆಯ ಮರಗಳು, ವಿವಿಧ ವರ್ಣದ ಹೂವಿನ ಗಿಡಗಳು ಧಾಮದ ಸೌಂದರ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಧಾಮದ ರಸ್ತೆಯ ಇಕ್ಕೆಲಗಳಲ್ಲಿ ಭಾರತದ ಸಾಧಕರ 8 ಅಡಿ ಎತ್ತರದ ಮೂರ್ತಿಗಳನ್ನು ನಿರ್ಮಿಸಲಾಗಿದ್ದು ಅವು ಭಾರತದ ಸಾಧನೆಯ ತತ್ತ್ವ ಸಾರುವುದರ ಜತೆಗೆ ಪರೇರಣೆ ನೀಡುತ್ತವೆ.

12) ಜಗತ್ತಿನ ಅಂಧಕಾರವಳಿಸುವ ಸೂರ್ಯನಾರಾಯಣ ಸಂಕೇತವಾಗಿ ಸೂರ್ಯ ಪ್ರಕಾಶಿತ ಸಪ್ತವರ್ಣಗಳ ದ್ಯೋತಕವಾಗಿ 7 ಅಶ್ವಗಳ (ಕುದುರೆ) ಅನುಪಮ ಸೂರ್ಯರಥ, ಚಂದ್ರನ 16 ಕಲೆಗಳ ಪ್ರತೀಕವಾಗಿ 16 ಜಿಂಕೆಗಳ ಅದ್ಭುತ ಚಂದ್ರರಥ, ಶೌರ್ಯದ ಸಂಕೇತವಾಗಿ ವೀರರಥ, ರಾಷ್ಟ್ರ ನಿರ್ಮಾಣದಲ್ಲಿ ಯೋಗದಾನ ಮಾಡಿದವರ ಸವಿನೆನಪಿಗಾಗಿ ರಾಷ್ಟ್ರರಥ, ಬಾಲರಥ, ಸ್ತ್ರೀರಥ ಹೀಗೆ ರಥಗಳ ಅಭೂತಪೂರ್ವ ಸಂಗಮ ಸಮುಚ್ಛಯ ಧಾಮವಾಗಿದೆ.

ಅಕ್ಷರಧಾಮ ಅಕ್ಷರಗಳ ರಾಶಿಯ ಜತೆಗೆ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ. ಭಾರತ ದೇಶವನ್ನು ತೆಗಳುವವರು ಒಂದು ಬಾರಿ ಅಕ್ಷರಧಾಮ ಸಂದರ್ಶಿಸಿದರೇ ಅವರಿಗೆ ದೇಶ, ರಾಷ್ಟ್ರ, ದೈವ ಭಕ್ತಿಯ ಅರಿವು ಮೂಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಮನರಂಜನೆಗೆಂದು ಎಲ್ಲೆಲ್ಲೋ ಸುತ್ತಾಡುವ ಬದಲಿಗೆ ಗುಜರಾತ್ ಹಾಗೂ ನವದೆಹಲಿಯಲ್ಲಿರುವ ಅಕ್ಷರಧಾಮಕ್ಕೆ ಭೇಟಿ ನೀಡಿ….

ರಾಷ್ಟ್ರ ರಕ್ಷಣೆಯ ಸಾರಥಿಗೆ ಅಕ್ಷರಧಾಮ ಪ್ರೇರಣೆ ನೀಡಲಿ ಎಂಬುದು ಲೇಖನದ ಆಶಯ..

– ವಿಠ್ಠಲ ಪರೀಟ, ಮುಧೋಳ

ಚಿತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles