ಬಾಬಾಸಾಹೇಬ್ ಅಂಬೇಡ್ಕರ್ ಮೀಸಲಾತಿ ಕುರಿತು ಹೇಳಿದ್ದೇನು? ಆದರೆ 70 ವರ್ಷಗಳಿಂದ ಆಗುತ್ತಿರೋದೇನು? ಮೀಸಲಾತಿಯ ಕುರಿತು ದಲಿತ ಯುವಕನ ಮನದಾಳದ ಮಾತುಗಳು

ನಾನೊಬ್ಬ ದಲಿತನಾಗಿ ನನ್ನ ರಾಷ್ಟ್ರದ ಬಗ್ಗೆ ಯೋಚಿಸಿ ಈ ಮಾತುಗಳನ್ನ ಹೇಳಲೇಬೇಕೆನ್ನೆಸುತ್ತಿದೆ.

ಅಷ್ಟಕ್ಕೂ ಬಾಬಾಸಾಹೇಬ್ ಅಂಬೇಡ್ಕರ್ ಮೀಸಲಾತಿ ಬಗ್ಗೆ ಹೇಳಿದ್ದಾದರೂ ಏನು? ಮೀಸಲಾತಿ ಕುರಿತಾದ ಅವರ ನಿಲುವೇನಾಗಿತ್ತು?

ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಸಮಿತಿಯಲ್ಲಿ ಮೀಸಲಾತಿಯ ಕುರಿತಾದ ಚೆರ್ಚೆ ಹೀಗಿತ್ತು;

ಅಂಬೇಡ್ಕರ್: ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದವರಿಗೆ ಮೀಸಲಾತಿ ಕೊಡಬೇಕು. ಮೀಸಲಾತಿ ಭಾರತದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಸಹಾಯವಾಗುತ್ತದೆ.

ದಲಿತರು ಸಾಮಾಜಿಕವಾಗಿ ಮತ್ತು ಆರ್ಥಿವಾಗಿ ಸದೃಢರಾದರೆ ದೇಶದ ಅಭಿವೃದ್ಧಿ ಸಾಧ್ಯ, ಮತ್ತು ಸಮಾಜದಲ್ಲಿ ಸಮಾನತೆ ತರುವುದಕ್ಕೆ ಅದು ಕ್ರಾಂತಿಕಾರಿ ಹೆಜ್ಜೆಯಾಗುತ್ತೆ, ಅಂದರೆ ದಲಿತರು ಶೈಕ್ಷಣಿಕವಾಗಿ ಸದೃಢರಾಗಬೇಕೆನ್ನುವುದು ನನ್ನ ಬೇಡಿಕೆ ಎಂದು ಅಂಬೇಡ್ಕರ್ ಪ್ರಸ್ತಾಪಿಸಿದರು.

ಕೆ ಎಮ್ ಮುನಷಿ : ಅಂಬೇಡ್ಕರ್ ನೀವು ಮೀಸಲಾತಿ ಕೇಳಿದರೆ ಎಲ್ಲಾ ವರ್ಗದವರಿಗೂ ಕೊಡಬೇಕಾಗುತ್ತದೆ ಅಂದರೆ ಸಿಖ್, ಪಾರ್ಸಿ, ಮುಸ್ಲಿಂ ಹೀಗೆ ಎಲ್ಲರೂ ಕೇಳುತ್ತಾರೆ,ಅದಕ್ಕಾಗಿ ಮೀಸಲಾತಿ ವಿಷಯ ಕೈಬಿಡೋದು ಒಳ್ಳೇದು ಮತ್ತು ನಮ್ಮ ಸರ್ದಾರ್ ಪಟೇಲ್ ರ ನಿಲುವು ಇದೇ ಆಗಿದೆ.

ಅಂಬೇಡ್ಕರ್ : ನೂರಾರು ವರ್ಷಗಳಿಂದ ನಮ್ಮ ಜನರು ತುಂಬ ಬಳಲಿದ್ದಾರೆ ಮತ್ತು ಶೋಷಣೆ ಅನುಭವಿಸಿದ್ದಾರೆ ಅದಕ್ಕೆ ನಾನು ಯಾವುದೇ ಕಾರಣಕ್ಕೂ ಮೀಸಲಾತಿ ವಿಷಯ ಕೈಬಿಡುವ ಪಕ್ಷದಲ್ಲಿಲ್ಲ.

ಸರ್ದಾರ್ ಪಟೇಲ್ : ಮೀಸಲಾತಿಯಿಂದ ಜಾತೀಯತೆ ಹೆಚ್ಚಾಗುತ್ತೆ ಅಂತೆ ನಿಮಗನಿಸೋಲ್ಲವಾ? ಅದಕ್ಕೆ ಮೀಸಲಾತಿ ವಿಷಯದ ಪ್ರಸ್ತಾಪ ಅಪ್ರಸ್ತುತ ಅಂತ ನನಗನಿಸುತ್ತೆ.

ಅಂಬೇಡ್ಕರ್: ನಮ್ಮ ಜನ ನೂರಾರು ವರ್ಷವಳಿಂದ ಶೋಷಣೆ ಅನುಭವಿಸಿದ್ದೇವೆ, ಯಾವುದೇ ಕಾರಣಕ್ಕೂ ಮೀಸಲಾತಿ ಕೈಬಿಡುವ ಮಾತೇ ಇಲ್ಲ. ಒಂದು ವೇಳೆ ಹಾಗೇನಾದರೂ ಮೀಸಲಾತಿ ಕೈಬಿಡಬೇಕೆಂದರೆ ನಾನು ಸಂವಿಧಾನ ಕರುಡು ಸಮಿತಿಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಮ್ಮ ರಾಜೀನಾಮೆ ಪತ್ರವನ್ನ ಪಟೇಲ್ ಅವರ ಕೈಗೆ ಕೊಟ್ಟರು.

ಪಟೇಲ್: ನೀವು ಇಲ್ಲದೆ ಈ ಸಂವಿಧಾನ ರಚನೆ ಕನಸಿನ ಮಾತು, ಸ್ವತಂತ್ರ ಭಾರತಕ್ಕೆ ನಿಮ್ಮ ಸೇವೆ ಅಗತ್ಯವಿದೆ ಎಂದು ಅಂಬೇಡ್ಕರ್ ಅವರು ನೀಡಿದ್ದ ರಾಜಿನಾಮೆ ಪತ್ರವನ್ನ ಹರಿದು ಹಾಕಿ ಮೀಸಲಾತಿಯನ್ನ ಒಪ್ಪಿದರು.

ಅಷ್ಟು ಕಷ್ಟ ಪಟ್ಟು ನಮಗೆ ಬಾಬಾಸಾಹೇಬರು ನೀಡಿದ್ದ ಮೀಸಲಾತಿ ವಾಸ್ತವಾಗಿ ಹೇಗೆಲ್ಲಾ ದುರುಪಯೋಗ ವಾಯ್ತು ಅನ್ನೋದರ ಬಗ್ಗೆಯೂ ತಮಗೂ ಗೊತ್ತಿದೆ.

ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗಿದ್ದೀವಾ? ಖಂಡಿತ ಇಲ್ಲ.

ಆದರೆ 70 ವರ್ಷಗಳಿಂದ ಮೀಸಲಾತಿ ಯಿಂದ ಆಗುತ್ತಿರುವುದಾದರೂ ಏನು?

1. ಯಾರಿಗೆ ಮೀಸಲಾತಿ ಸಿಗಬೇಕಾಗಿತ್ತೋ ಅವರಿಗೆ ಅದು ತಲುಪುತ್ತಿಲ್ಲ.

2. ದಲಿತ ಯುವಕರು ಮೀಸಲಾತಿಯನ್ನ ಉಪಯೋಗಕ್ಕಿಂತ ಜಾಸ್ತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಮೀಸಲಾತಿ ಇದೆ ಅನ್ನೊ ಕಾರಣಕ್ಕೆ ಕಡಿಮೆ ಅಂಕ ಬಂದರೂ ನನಗೆ ಜಾತಿಯ ಹೆಸರಮೇಲೆ ಕೆಲಸ ಸಿಕ್ಕೇ ಸಿಗುತ್ತೆ ಅನ್ನೋ ಭಾವದಿಂದ ಪೈಪೋಟಿ ನೀಡೋದನ್ನೇ ಮರೆತಿದ್ದಾರೆ.

3. ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ. ಕಾರಣ ದಲಿತ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನ ತೆಗೆದುಕೊಂಡರೂ ಜಾತಿ ಎಂಬ ಲೇಬಲ್ ನಡಿ ಉತೀರ್ಣರಾಗುತ್ತಿದ್ದಾರೆ.

4. ಉನ್ನತ ಹುದ್ದೆಯಲ್ಲಿ ಇರುವ ದಲಿತ ಅಧಿಕಾರಿಗಳು ಕಡಿಮೆ ಅಂಕಗಳನ್ನು ಪಡೆದುಕೊಂಡು ಆ ಹುದ್ದೆಗೆ ಬರುದರಿಂದ ಹೆಚ್ಚಿನ ಅಂಕಗಳನ್ನ ಗಳಿಸಿದ Non – SC/ST ವಿದ್ಯಾರ್ಥಿಗಳಿಗೆ, ಕೆಲಸದ ಆಕಾಂಕ್ಷಿಗಳಿಗೆ ನಿರಾಸೆಯಾಗುತ್ತಿದೆ.

5. ಬಾಬಾಸಾಹೇಬರು Reservation ಮೀಸಲಾತಿಯಿಂದ ಮೇಲು ಕೀಳು ಎಂಬ ಭಾವನೆ ಹೋಗಲಾಡಿಸಲು ಪ್ರಯತ್ನಿಸಿದ್ದು ಇಂದು ಅದೇ ಮೀಸಲಾತಿಯ ಮೂಲಕ ಜಾತೀಯತೆಯ ಅನಾವರಣವಾಗಿ ನಾನು ದಲಿತ ನಾನು ದಲಿತ ಅಂತ ಓಡಾಡುವಂತಾಗಿದೆ. ಇದರಿಂದ ಜಾತೀಯತೆ ನಿರ್ಮೂಲನೆಯಾಗೋ ಬದಲು ಇನ್ನಷ್ಟು ಜಾತೀಯತೆಗೆ ಪ್ರೋತ್ಸಾಹ ನೀಡಿದಂತಾಗುತ್ತಿದೆ.

10 ವರ್ಷಗಳವರೆಗೆ ಮಾತ್ರ ಮೀಸಲಾತಿ, ನಂತರ ಅದನ್ನ ತೆಗೆದು ಹಾಕಿ ಅಂತ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದು ಬಹುಶಃ ಮೇಲೆ ನಾನು ಉಲ್ಲೇಖಿಸಿದ ಕಾರಣಗಳನ್ನ ಮನಗಾಣಿಸಿಯೇ ಅನಿಸುತ್ತೆ.

ನಾನೂ ಒಬ್ಬ ದಲಿತನಾಗಿ ಮೀಸಲಾತಿ ಅನ್ನೋದನ್ನ ಶೈಕ್ಷಣಿಕವಾಗಿ ಸಬಲವಾಗಲು ಉಪಯೋಗಿಸಿಕೊಂಡಿದ್ದೇನೆ ಹೊರತು ಕಡಿಮೆ ಅಂಕ ತಗೊಂಡು ನಾನ್ ಮುಂದೆ ಬರ್ತೀನಿ ಅಂತ ಯಾವತ್ತೂ ಅಂದುಕೊಂಡಿಲ್ಲ.

ನಾನು ಸದ್ಯ ದೆಹಲಿಯಲ್ಲಿ IAS ಕೋಚಿಂಗ್ ತೆಗೆದುಕೊಳ್ಳುತ್ತಿದ್ದೇನೆ. IAS ಗಾಗಿ ಕಠಿಣ ಪರಿಶ್ರಮವನ್ನೂ ಪಡುತ್ತಿದ್ದೇನೆ. ಆದರೆ ನನ್ನ ಜೊತೆಗೆ ಓದಿದ ಹಾಗು ಅದಾಗಲೇ ಕೋಚಿಂಗ್ ಮುಗಿಸಿ ಹೋದಂತಹ ವಿದ್ಯಾರ್ಥಿಗಳು ತಮ್ಮ ಹತ್ತಿರ ಜ್ಞಾನವಿಟ್ಟುಕೊಂಡೂ ತಾವು ದಲಿತರಲ್ಲ ಅನ್ನೋ ಕಾರಣಕ್ಕೆ ಕೆಲಸ ಕೈ ತಪ್ಪಿಸಿಕೊಂಡಿದ್ದಂತೂ ನಿಜ.

ಉದಾಹರಣೆ;

ಒಮ್ಮೆ HAL ನಲ್ಲಿ Junior Scientist ಹುದ್ದೆಗೆ
ನೇರ ಭರ್ತಿ ನಡೀತಿತ್ತಂತೆ, Cut off marks 67% ಗೆ ಬಂದು ನಿಂತಿದ್ದರಿಂದ 78% ಮಾರ್ಕ್ಸ್ ಗಳಿಸಿದ್ದ(GM category) ವಿದ್ಯಾರ್ಥಿಯೂ ಆಯ್ಕೆಯಾದ & 67% ಗಳಿಸಿದ್ದ ಇನ್ನೊಬ್ಬ SC ವಿದ್ಯಾರ್ಥಿಯೂ ಆಯ್ಕೆಯಾದನಂತೆ.

ಆದರೆ ಒಂದು ವರ್ಷದ ಟ್ರೇನಿಂಗ್ ನ ನಂತರ 67% ಪಡೆದಿದ್ದ ಆ ಯುವಕನನ್ನ disqualify ಮಾಡಿದರಂತೆ, ಕಾರಣ ಆತ ಎಂಜಿನಿಯರಿಂಗ್ ಓದಿದ್ರೂ ಎಂಜಿನಿಯರಿಂಗ್ ವಿಷಯಗಳ ಬಗ್ಗೆ ಆತನಿಗೆ technical knowledge ನ ಬಗ್ಗೆ ಅಷ್ಟಾಗಿ ಗೊತ್ತೇ ಇರಲಿಲ್ಲವಂತೆ.

ಹೀಗೆ ಎಲ್ಲಾ ಆಡಳಿತ ವಿಭಾಗದಲ್ಲೂ ನಮಗೆ ಮೀಸಲಾತಿ ಎಷ್ಟು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಾಗಿ ನಮಗೆ ಮುಜುಗರವಾಗುವ ರೀತಿಯಲ್ಲಿ ನಮ್ಮ ಜನ ಅದನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ ಅನ್ನಬಹುದು.

ಇದು ನಮ್ಮ ಕಥೆಯಾದರೆ ಇನ್ನು ರಾಜಕೀಯ ಪಕ್ಷಗಳು ಮೀಸಲಾತಿ ಎಂಬ ಅಸ್ತ್ರವನ್ನ ಹೇಗೆ ಉಪಯೋಗಿಸುತ್ತಿದ್ದಾರೆ ಗೊತ್ತಾ??

ರಾಜಕೀಯ ಪಕ್ಷಗಳು ನಮ್ಮನ್ನ ವೋಟಬ್ಯಾಂಕಿನ ಪ್ರಾಣಿಗಳಂತೆ ಕಾಣುತ್ತಿದ್ದಾರೆ, ಹೌದು ಅವರ ವೋಟ್ ಬ್ಯಾಂಕ್ ರಾಜಕಾರಣಕೋಸ್ಕರ ಅವರ ಮನ ಬಂದಂತೆ ನಮ್ಮ ಹೆಸರಿನ ಮೇಲೆ, ಬಾಬಾಸಾಹೇಬರ ಹೆಸರಮೇಲೆ ನಮ್ಮನ್ನ ಉಪಯೋಗಿಸಿಕೊಂಡಿದ್ದಾರೆ.

ನಮ್ಮ ಏಳಿಗೆಗಾಗಿ ಕಳೆದ 70 ವರ್ಷಗಳಲ್ಲಿ ಕೆಲವೇ ಕೆಲವು ಬೆರಳಣಿಕೆಯ ರಾಜಕಾರಣಿಗಳನ್ನ ಹೊರತುಪಡಿಸಿ ಮಿಕ್ಕ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಸುಳ್ಳು ಆಶ್ವಾಸನೆ, ನೀವು ದಲಿತರು ನೀವು ದಲಿತರು ಅಂತ ಹೇಳಿ ಹೇಳಿ ನಮ್ಮನ್ನ ಮಾನಸಿಕವಾಗಿ ಮೇಲೇಳದಂತೆ “ನಾವು ಕೆಳಜಾತಿಯವರು” ಅನ್ನೋ ಭಾವನೆಯನ್ನೇ ಬಿತ್ತಿದ್ದಾರೆ ಹೊರತು ಮತ್ತೇನೂ ಮಾಡಿಲ್ಲ.

ಹಾಗೇನಾದರೂ ದಲಿತರ ಪರ ಕಾಳಜಿಯಿರುವ ರಾಜಕಾರಣಿಗಳಾಗಿರುತ್ತಿದ್ದರೆ ದೇಶದಲ್ಲಿ ಬಾಬಾಸಾಹೇಬರ ನಂತರ ಅವರ ರೀತಿಯಲ್ಲೇ ಅದೆಷ್ಟೋ ಅಂಬೇಡ್ಕರರು ಹುಟ್ಟಿ ಬಂದರುತ್ತಿದ್ದರು.

ಸಮಾಜದಲ್ಲಿ ಮೀಸಲಾತಿ ಎಂದರೆ ಅನ್ಯ ಜಾತಿಯ ಕೆಲ ಜನ ಮೂಗು ಮುರಿತಾರೆ. ನಾನೂ ಮೊದ ಮೊದಲು ಅವರನ್ನ ನೋಡಿ ಇವರು ದಲಿತ ವಿರೋಧಿ, ಮೀಸಲಾತಿ ವಿರೋಧಿ ಅಂತ ಅವರ ವಿರುದ್ಧ ಕೆಂಡ ಕಾರಿದ್ದುಂಟು.

ಆದರೆ ಅವರು ಹಾಗನ್ನೋದಕ್ಕೆ ಕಾರಣವಾದರೂ ಇರಬೇಕಲ್ಲ? ಅದರ ಬಗ್ಗೆ ಹೀಗೇ ಯೋಚಿಸುತ್ತ ಕೂತಾಗ ಕೆಲವರ ಬಗ್ಗೆ analyze ಮಾಡ್ತಾ ಹೋದೆ

1. ಒಬ್ಬ ದಲಿತ ರಾಜಕಾರಣಿ ಎಲೆಕ್ಷನ್ ನಿಲ್ಲುವಾಗ ತನ್ನ ಮೀಸಲಾತಿಯ ಮೂಲಕ ಚುನಾವಣೆ ಗೆಲ್ಲುತ್ತಾನೆ, ತದನಂತರದಲ್ಲಿ ಹಲವಾ ಚುನಾವಣೆಗಳಲ್ಲೂ ಗೆದ್ದು ಉನ್ನತ ಸ್ಥಾನಕ್ಕೇರುತ್ತಾನೆ, ಕೋಟಿ ಕೋಟಿ ಆಸ್ತಿಯ ಒಡೆಯನಾಗ್ತಾನೆ, ಇಷ್ಟಾದರೂ ಆತ ಮುಂದಿನ ಚುನಾವಣೆಗೆ ಮತ್ತೆ ಮೀಸಲಾತಿಯನ್ನ ಉಪಯೋಗಿಸಿಕೊಂಡೇ ನಾಮಿನೇಷನ್ ಫೈಲ್ ಮಾಡ್ತಾನೆ.

ಸಾಮಾಜಿಕವಾಗಿ, ಆರ್ಥಿಕವಾಗಿ ಸಶಕ್ತನಾದ ಮೇಲೆ ಆತನಿಗೆ ಮೀಸಲಾತಿಯ ಅಗತ್ಯವಿದೆಯೇ? ಇಲ್ಲ. ಆದರೂ ಆತ ಮತ್ತೆ ರಿಸರ್ವೇಶನ್ ಕೋಟಾದಡಿಲ್ಲೇ ಗೆದ್ದು ಬರ್ತಾನೆ.

2. ಅಪ್ಪ ರಿಸರ್ವೇಶನ್ ಮೂಲಕ ಸರ್ಕಾರಿ ಡಾಕ್ಟರ್ ಆದ, ತಾಯಿ ಅದೇ ಮೀಸಲಾತಿಯ ಮೂಲಕ ಸರ್ಕಾರಿ ಶಿಕ್ಷಕಿಯಾಗಿ ನೇಮಕವಾದಳು, ಈಗ ಈ ಕುಟುಂಬ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾದ ಹಾಗೇ ಅಲ್ಲವೇ? ಆದರೆ ಅವರು ಇಲ್ಲ ಅಂತಾರೆ, ತಮ್ಮ ಮಕ್ಕಳಿಗೂ ಈ ಮೀಸಲಾತಿ ಸಿಗಬೇಕು ಅನ್ನೋದು ಅವರ ವಾದ, ಅಪ್ಪ ಅಮ್ಮ ಇಬ್ಬರೂ ಮೀಸಲಾತಿಯ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದ ಮೇಲೂ ಮಕ್ಕಳಿಗೂ ಮೀಸಲಾತಿ ಕೊಡಿಸಿದರೆ ಅನ್ಯ ಜಾತಿಯ ಜನ ಮೀಸಲಾತಿಯ ಬಗ್ಗೆ ಮೂಗು ಮುರಿಯೋದರಲ್ಲಿ ತಪ್ಪೇನಿಲ್ಲ ಅಂತ ಆಗ ನನಗನ್ನಿಸಿತು.

ನನ್ನ ಕೋರಿಕೆ ಉತ್ತಮ ಶಿಕ್ಷಣಕ್ಕೆ ಹೊರತು ಪಡಿಸಿ ಉಳಿದೆಲ್ಲಾ ಮೀಸಲಾತಿಯನ್ನ ತೆಗೆದು ಹಾಕಬೇಕು ಅದು ಮುಂಬಡ್ತಿ ಇರಬಹುದು, ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಇರಬಹುದು ಅಥವಾ ರಾಜಕೀಯದಲ್ಲಿ ಮೀಸಲಾತಿ ಇರಬಹುದು.

ನಮಗೆ ಬೇಕಾಗಿರುವುದು ಮೀಸಲಾತಿ ಅಲ್ಲ, ನಮಗೆ ಬೇಕಾಗಿರುವುದು ಸಮಾಜದಲ್ಲಿ ಗೌರವ, ಆದರೆ ನನ್ನದೇ ಜನ ಇದನ್ನ ಸದುಪಯೋಗ ಪಡೆದುಕೊಳ್ಳದೆ 70 ವರ್ಷವಾದರೂ ಮೀಸಲಾತಿ ನನ್ನ ಆ ಜನ್ಮ ಸಿದ್ಧ ಹಕ್ಕು, ಮೀಸಲಾತಿಯನ್ನ ತೆಗೆದು ಹಾಕಿದರೆ ಉಗ್ರ ಹೋರಾಟ ಮಾಡ್ತೇವೆ, ದಲಿತರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡ್ತೇವೆ ಅಂತ ಉದ್ಧಟತನದಿಂದ ಬೊಬ್ಬಿರೀತಾರಲ್ಲ ಅವುಗಳನ್ನೆಲ್ಲಾ ಕಣ್ಣಾರೆ ಕಂಡು ನೋವಿನಿಂದ ಇಷ್ಟೆಲ್ಲಾ ಹೇಳಿಕೊಂಡೆ.

ಬಾಬಾಸಾಹೇಬರು ಹೇಳಿದ್ದು
“Educate, Organize, Succeed” ಅಂತ, ನಾವು ನಿಜವಾಗಿಯೂ ಅಂಬೇಡ್ಕರರನ್ನ ಗೌರವಿಸುತ್ತೇವಂದರೆ ಈ ಮೂರೂ ಶಬ್ದಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಾಬಾಸಾಹೇಬರು ತಮ್ಮ ಜನರ ಬಗ್ಗೆ ಕಂಡ ಕನಸು ನನಸಾಗುತ್ತೆ ಹೊರತು ಅನ್ಯ ಜಾತಿಗಳನ್ನ ದ್ವೇಷಿಸುತ್ತ, ಅವರೇ ನಮ್ಮ ಇಂದಿನ ಈ ಸ್ಥಿತಿಗೆ ಕಾರಣ ಅಂತ ಗೊಣಗುತ್ತ ಕೂತರೆ ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ಇದ್ದಲ್ಲೇ ಇರಬೇಕಾಗುತ್ತೆ!!

– ವೇಣುಗೋಪಾಲ, ಆಂಧ್ರಪ್ರದೇಶ

  • 1.1K
    Shares