ರಾಜಕೀಯರಾಜ್ಯಸುದ್ದಿ ಜಾಲ

ಉತ್ತರ ಕರ್ನಾಟಕದ ದಶಕಗಳ ಸಮಸ್ಯೆಗೆ ಸಿಗಲಿದೆಯೇ ಕೆಲವೇ ತಿಂಗಳುಗಳಲ್ಲಿ ಪರಿಹಾರ..!!??

ತಿಂಗಳೊಳಗೆ ಮಹಾದಾಯಿ ವಿವಾದ ಇತ್ಯರ್ಥ..!!

ತಿಂಗಳೊಳಗೆ ಮಹಾದಾಯಿ ವಿವಾದ ಇತ್ಯರ್ಥ ಹೌದು ಹೀಗಂತ ಹೇಳಿರುವುದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು. ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಭರ್ಜರಿ ಸಾಗಿದೆ. ನಿನ್ನೆ ಬೆಳಗಾವಿಯ ನಡೆದ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪನವರುವ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವೊಲಿಸಿ ಕಳಸಾ-ಬಂಡೂರಿ ಯೋಜನೆಯನ್ನು ಬರುವ ಒಂದು ತಿಂಗಳೊಳಗೆ ಪರಿಹರಿಸುವೆ ಎಂದು ಹೇಳಿದ್ದಾರೆ.

ಅಗತ್ಯ ಬಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆಯೂ ಮಾತುಕತೆ ನಡೆಸಲಾಗುವುದು ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಸ್ವಾಮಿ ಯಡಿಯೂರಪ್ಪನವರೇ ಇಂತಹ ಭರವಸೆಗಳನ್ನು ತುಂಬಾ ಜನ ರಾಜಕಾರಣಿಗಳಿಂದ ನಾವು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ದಯವಿಟ್ಟು ನೀವಾದರೂ ಪ್ರಮಾಣಿಕ ಪ್ರಯತ್ನ ಮಾಡಿ ಈ ವಿವಾದವನ್ನು ಬಗೆಹರಿಸಿ.

ಅಷ್ಟಕ್ಕೂ ಏನಿದು ಮಹಾದಾಯಿ ವಿವಾದ?

ಮಹಾದಾಯಿ ನದಿಯನ್ನು ಗೋವಾದ ಜೀವನದಿ ಎಂದು ಕರೆಯುತ್ತಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ.

ರಾಜ್ಯದ ಬೆಳಗಾವಿಯ ಮೂಲಕ ಈ ನದಿ ಹರಿದು ಸಮುದ್ರ ಸೇರಿಕೊಳ್ಳುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ.

ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ.

ಕರ್ನಾಟಕದ ಮೂಲಕ ಹರಿದು ಹೋಗುವ ನೀರನ್ನು ಬಳಸಿಕೊಂಡು, ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಮಹಾದಾಯಿ ಅಥವ ಕಳಸಾ-ಬಂಡೂರಿ ಯೋಜನೆ.

ಕಳಸಾ-ಬಂಡೂರಿ ಹೆಸರೇಕೆ..?

ಈ ಹೋರಾಟಕ್ಕೆ ಕಳಸಾ-ಬಂಡೂರಿ ಮತ್ತು ಮಹಾದಾಯಿ ಹೋರಾಟ ಎಂಬ ಹೆಸರಿದೆ.
ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ, ಕಳಸಾ-ಬಂಡೂರಿ ಎಂಬ ಹೆಸರೂ ಇದೆ

1978 ರಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು

1980 ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು.
ಕರ್ನಾಟಕ ಸರ್ಕಾರ 1988 ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು.

ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು.

2000 ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನೀಡಿತು.
ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ., ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು.

ಕೇಂದ್ರ ಸರ್ಕಾರ 2002 ರಲ್ಲಿ ಯೋಜನೆಗೆ ಒಪ್ಪಿಗೆ ಕೊಟ್ಟಿತು. 2002 ರ ಏ.30 ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು.
ಆದರೆ, 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿತು.

ಈ ನದಿ ವಿವಾದದ ಬಗ್ಗೆ ನ್ಯಾಯಾಧೀಕರಣ ರಚಿಸುವಂತೆ ಗೋವಾ ಸರ್ಕಾರ 2002ರಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಿತು.
2002 ರ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಕೇಂದ್ರ ಜಲ ಆಯೋಗ ತಡೆ ನೀಡಿತು. ನಂತರ ದೆಹಲಿಯಲ್ಲಿ ಕರ್ನಾಟಕ-ಗೋವಾ ಸಚಿವರ ಸಭೆ ನಡೆಯಿತು.

ಬೆಳಗಾವಿಯ ಜಿಲ್ಲೆಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006 ರ ಸೆಪ್ಟೆಂಬರ್‌ನಲ್ಲಿ ಭೂಮಿ ಪೂಜೆ ಮಾಡಲಾಯಿತು. 2006 ರ ನವೆಂಬರ್‌ನಲ್ಲಿ ಗೋವಾ ಸರ್ಕಾರ ಈ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. 2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧೀಕರಣವನ್ನು ನೇಮಕ ಮಾಡಲಾಯಿತು.

2014ರಲ್ಲಿ ನ್ಯಾಯಾಧೀಕರಣದ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 2015ರ ಜೂನ್​ನಿಂದ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭವಾಗಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಮಹಾದಾಯಿ ಅಥವ ಕಳಸಾ-ಬಂಡೂರಿ ಯೋಜನೆ. ಆದರೆ ಈಗ ವಿವಾದಗಳಿಂದ ಅಲ್ಲಿನ ಜನರಿಗೆ ನೀರಾವರಿಗೆ ನೀರು ಇರಲಿ, ಕುಡಿಯಲು ನೀರಿಲ್ಲದ ಸ್ಥಿತಿಯುಂಟಾಗಿದೆ. ಹೀಗಾಗಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ಕನ್ನಡಿಗರು ನಿರಂತರ ಪ್ರತಿಭಟನೆಗೆ ಇಳಿದಿದ್ದಾರೆ.

ರಾಜಕಾರಣಿಗಳು ಇದನ್ನೇ ಬಂಡವಾಳವಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಹೊರತು , ಯಾವದೇ ಪ್ರಯತ್ನವಂತೂ ಮಾಡಿಲ್ಲ. ಹಿಂದಿನಿಂದಲೂ ಈ ವಿವಾದ ಬಗೆಹರಿಸುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಲೇ ಬಂದಿದ್ದಾರೆ. ಈಗ ಯಡಿಯೂರಪ್ಪನವರು ಅದೇ ಭರವಸೆ ಕೊಟ್ಟಿದ್ದಾರೆ. ಕಾದು ನೋಡಬೇಕಷ್ಟೆ.

-ಸೌಮ್ಯ ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles