‘ಕೋರಂಟಿ’ ಹನುಮಾನ ಮಂದಿರದ ಇತಿಹಾಸ!!! ಇದನ್ನ ಓದಿದ ನಂತರ ಈ ದೇವಸ್ಥಾನದ ಮೇಲೆ ನಿಮಗೆ ಶೃದ್ಧೆ ಇನ್ನಷ್ಟು ಹೆಚ್ಚಾಗುವುದಂತೂ ಖಚಿತ!!!

ಕಲಬುರ್ಗಿಯ ಕೋರಂಟಿ ಹನುಮಾನ್ ಗುಡಿ ಎಂದರೆ ಅದು ಯಾರಿಗೆ ತಾನೇ ತಿಳಿಯದು! ಊರು ಕಾಯಲು ಹನುಮಪ್ಪ ಗಧೆ ಹಿಡಿದು ಊರ ಹೊರಗಡೆ ನಿಲ್ಲುವುದು ಸರ್ವೇ ಸಾಮಾನ್ಯ!

ಅದೇ ರೀತಿ ಆ ಹನಮಪ್ಪನ ಹೆಸರುಗಳು ಬೇರೆ ಬೇರೆ ಯಾಗಿರುವುದೂ ಸಾಮಾನ್ಯವೇ!
ಉದಾಹರಣೆಗೆ : ಲಾಲ್ ಹನುಮಾನ ದೇವ್ರು , ಗಾಳಿ ಆಂಜನೇಯ, ತುಳಸಿಗೆರೆ ಹನುಮಪ್ಪ ಹೀಗೆ ಒಂದಾ ಎರಡಾ!! ಅದೇ ರೀತಿ ಈ ನಮ್ಮೂರಿನ ಹನುಮಪ್ಪನ ಹೆಸರು ‘ಕೋರಂಟಿ ಹನುಮಾನ್ ದೇವರು’ ಅಂತ.

 

ಈಗ ನನ್ನ ಕುತೂಹಲ ಏನಪ್ಪ ಅಂದ್ರೆ ನಮ್ಮ ಈ ಹನುಮಪ್ಪನಿಗೆ ಈ “ಕೋರಂಟಿ” ಎಂಬ ವಿಶೇಷ ಪದದ ನಾಮಕರಣ ಹೇಗಾಯ್ತು ಹಾಗೂ ಇದರ ಅರ್ಥ ಏನು ಎಂಬುದು.

ಕನ್ನಡ ಶಬ್ದಕೋಶವನ್ನು ಜಾಲಾಡಿದರೆ ಅಲ್ಲಿ ಈ ಕೋರಂಟಿ ಶಬ್ದಕ್ಕೆ ಯಾವುದೇ ರೀತಿಯ ಅರ್ಥವಿಲ್ಲ! ಅನಿವಾರ್ಯವಾಗಿ ಇತಿಹಾಸ ಕೆದಕುತ್ತ ಹೋದೆ! ಅಲ್ಲಿಯೆ ಸಿಕ್ಕಿತ್ತು ಈ ರೋಚಕ ಕಥೆ!

ಅದು ಬ್ರಿಟಿಷರು ಆಳುತಿದ್ದ ಕಾಲ! ಹೆಚ್ಚಿನ ಸಂಖ್ಯೆಯಲ್ಲಿ ಜನ ಕುಷ್ಟರೋಗಕ್ಕೆ ಬಲಿಯಾಗತೊಡಗಿದ್ದರು! ಬ್ರಿಟಿಷರ ಪ್ರಕಾರ ಅದು ಲೆಪ್ರೋಸಿ, ಹಾಗೂ ಚಿಕಿತ್ಸೆಯೇ ಇಲ್ಲದ ಅತ್ಯಂತ ಭಯಾನಕ ಅಂಟುವ್ಯಾಧಿ!

ಕಲಬುರಗಿಯಲ್ಲಿ ಹಾಗು ಸುತ್ತಮುತ್ತ ಆ ರೋಗಕ್ಕೆ ಹಲವರು ತುತ್ತಾಗಿದ್ದರಿಂದ ಅವರುಗಳ ಪ್ರಕಾರ ಈ ರೋಗಪೀಡಿತರನ್ನು ಸ್ವಸ್ಥರಿಂದ ದೂರ ಇಡಬೇಕು ಎಂಬುದೇ ಅದಕ್ಕೆ ಪರಿಹಾರವಾಗಿತ್ತು.

ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಅವರನ್ನೆಲ್ಲಾ ಊರಿಂದ ಆಚೆಗಟ್ಟಬೇಕು!

ನನಗನ್ನಿಸುತ್ತದೆ ರೋಗಗ್ರಸ್ಥ ಜನ ಎಂಬ ಹಣೆಪಟ್ಟಿ ಕಟ್ಟಿ ತಮಗೆ(ಬ್ರಿಟಿಷರಿಗೆ) ತುಂಬಾ ಉಪದ್ರವ ಕೊಡುವ ಸ್ವಾತಂತ್ರ ಹೋರಾಟಗಾರರಿರಬೇಕು ಅದಕ್ಕೇ ಅವರು ಈ ಮಾರ್ಗ ಬಳಸಿರಬಹುದು ಎಷ್ಟೇ ಆಗಲಿ ಡಿವೈಡ್ & ರೂಲ್ ಬ್ರಿಟಿಷರ ಪಾಲಸಿ ಅಲ್ವೇ!!

ಹೀಗೆ ಅವರು ಈ ರೋಗಿಗಳನ್ನೆಲ್ಲ ಊರಹೊರಗಿನ ಈಗಿನ ಕೋರಂಟಿ ಹನುಮಾನ್ ಮಂದಿರ ಇರುವ ಪ್ರದೇಶಕ್ಕೆ ಕಳುಹಿಸುತ್ತಾರೆ ಹಾಗೆ ಈ ಪ್ರದೇಶಕ್ಕೆ “ಕ್ವಾರಂಟೈನ್” ಎಂದು ಕರೆಯಲು ಪ್ರಾರಂಭಿಸುತ್ತಾರೆ.

ಕ್ವಾರಂಟೈನ್(Quarantine) ಪದದ ಅರ್ಥ ಇಂಗ್ಲಿಷ್ ನಲ್ಲಿ ತುಂಬಾ ಭಿನ್ನವಾಗಿ/ಕೆಲವೊಮ್ಮೆ ಅವಮಾನೀಯ ರೀತಿಯಲ್ಲಿ ಕಾಣಿಸುತ್ತದೆ;

ಅದರ ಅರ್ಥ ಇಂಗ್ಲಿಷ್ ನಲ್ಲಿ ಹೇಳಬೇಕು ಅಂದರೆ “It is a ‘state of enforced isolation’. This is often used in connection to disease and illness, such as those who may possibly have been exposed to a communicable disease.
In practice”

ಅರ್ಥ “ಇದೊಂದು ಒತ್ತಾಯಪೂರ್ವಕ ಪ್ರವೇಶ ಹಾಗೂ ನಿರ್ಗಮನ ನಿಷಿದ್ಧ ಪ್ರದೇಶ, ಇಲ್ಲಿ ಅಂಟುವ್ಯಾಧಿಯನ್ನು ಪ್ರಸರಿಸುವಂತಹ ರೋಗಿಗಳನ್ನು ಇಡಲಾಗುತ್ತದೆ” ಎಂದು. ಇನ್ನೊಂದು ಅರ್ಥದಲ್ಲಿ ‘ದಿಗ್ಬಂಧನ’ ಎಂದೇ ಹೇಳಬಹುದು.

ಆದರೆ ಭಾರತೀಯರದ್ದು ಎಂದಿಗೂ ಆಧ್ಯಾತ್ಮ ಹಾಗೂ ಆಯುರ್ವೇದದಲ್ಲಿ ಎತ್ತಿದ ಕೈ.

ಆಗಿನ ಕಾಲದಲ್ಲಂತೂ ಪ್ರತಿ ನಾಲ್ಕು ಹೆಜ್ಜೆಗಳಿಗೆಲ್ಲ ನಮಗೆ ಸಾಧುಸಂತರ ದರ್ಶನದ ಭಾಗ್ಯಲಭಿಸುತಿತ್ತು!ಕಲಬುರ್ಗಿಯಂತೂ ಶರಣರ ನಾಡು! ದೇವರ ಭಜನೆಗೆ ಮೂದಲಿನಿಂದಲೂ ಪ್ರಸಿದ್ಧ.

ಇನ್ನೂ ಔಷಧೋಪಚಾರಗಳ ಬಗ್ಗೆ ಹೇಳಬೇಕೆಂದರೆ ಪ್ರತಿಮನೆಯ ಅಜ್ಜಿ ಹಾಗೂ ತಾಯಿಯೆ ಮೊದಲ ವೈದ್ಯರಾಗಿದ್ದರು, ಮನೆಮದ್ದಂತೂ ಎಲ್ಲರಿಗೂ ಇಂಗಿತವಾಗಿ ಒಬ್ಬರಿಂದ ಒಬ್ಬರಿಗೆ ಕರಗತವಾಗಿ ಬಂದ ವಿದ್ಯೆಯಾಗಿತ್ತು!

ಆಗಿನ ವಿಶೇಷವೆಂದರೆ ಈ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಅಥವಾ ಆಚರಣೆಯಿಂದಲೆ ವರ್ಗಾವಣೆಯಾಗುತಿತ್ತು.

ಈ ‘ಕ್ವಾರಂಟೈನ್’ ಪ್ರದೇಶದಲ್ಲಿ ಕೂಡಿಹಾಕಲಾದ ರೋಗಿಗಳು ಅಲ್ಲಿಯೇ ತಮ್ಮ ಸುತ್ತಮುತ್ತಲು ಸಿಗುವ ಸಸಿ, ಗಿಡಗಳಿಂದಲೇ ತಮ್ಮ ಚಿಕಿತ್ಸೆಯನ್ನು ಪ್ರಾರಂಭಿಸಿದರು.

ಜೊತೆಗೆ ಈ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ದಿನಾ ಬೆಳಿಗ್ಗೆ, ಸಾಯಂಕಾಲ ಪೂಜೆ-ಮಂಗಳಾರತಿಯ ಜೊತೆ ಭಜನೆ ಪ್ರಾರಂಭಿಸಿದರು.

ಹೊರಗಿನ ಜನರಿಗೆ ಇದೊಂದು ಆಕರ್ಷಕ ಸ್ಥಳವೆನ್ನಿಸತೊಡಗಿತು, ಆದರೆ ಆ ಪ್ರದೇಶಕ್ಕೆ ಏನೆಂದು ಕರೆಯುವುದು, ಆಂಗ್ಲ ಪದ ಕ್ವಾರಂಟೈನ್, ಕ್ವಾರಂಟಿ ಆಯಿತು, ಇನ್ನೂ ಸುಲಭಕ್ಕೆ ಎಂದಾಗ ಕೋರಂಟಿ ಆಯಿತು. ಸದಾ ಅಲ್ಲಿ ಪೂಜಿಸಲಾಗುತಿದ್ದ ಹನುಮ , ‘ಕೋರಂಟಿ ಹನುಮಂತ’ ನಾದನು.

ಜ್ಞಾನ, ಭಕ್ತಿ ಹಾಗೂ ಇವರುಗಳ ಶ್ರದ್ಧೆಯಿಂದಾಗಿ ಬ್ರಿಟಿಷರು ಅಸಾಧ್ಯ ಎಂದು ತೀರ್ಮಾನಿಸಿದ ವ್ಯಾಧಿಯಿಂದ ಎಲ್ಲರೂ ಗುಣಮುಖರಾದರು.

ಮುಂದೆ “ಕೋರಂಟಿ ಗ್ಯಾರಂಟಿ” ಎಂಬ ಪ್ರಚಲಿತ ನುಡಿ ಇಲ್ಲಿಯ ಮನೆಮಾತಾಯಿತು.

(ಇದು ಅಮ್ಮಮ್ಮ ಹೇಳಿದ ಕಥೆ , ನಾನೆಂದೂ ಪ್ರೂಫ್ ಕೇಳಲಿಲ್ಲ)

– ಡಾ. ನಾಗನಾಥ್ ಯಾದಗಿರಿ