ಯಾದಗಿರಿ ಹೈವೇಯಲ್ಲಿ ಪ್ರತ್ಯಕ್ಷವಾದ ಹಳ್ಳ..!!

ಯಾದಗಿರಿ: ಕೆರೆಯ ನೀರು ರಸ್ತೆಯ ಮೇಲೆ ಬಂದು ಹೆದ್ದಾರಿ ಸೇತುವೆ ಮುಳುಗಿ ವಾಹನ ಸವಾರರು ನಿತ್ಯ ನಿರಂತರವಾಗಿ ನರಕಯಾತನೆ ಅನುಭವಿಸ ಬೇಕಾದ ಪರಿಸ್ಥಿತಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮಕ್ಕೆ ಬಂದಿದೆ.

ಕೊಡಂಗಲ್-ಸಿಂದಗಿಯ, ರಾಜ್ಯ ಹೆದ್ದಾರಿ 16ರ ರಸ್ತೆಯ ಮೇಲೆ ಕೆರೆಯ ನೀರು ಕಳೆದ 15 ದಿನಗಳಿಂದ ಪ್ರತಿನಿತ್ಯವು ಪ್ರವಾಹದಂತೆ ಹರಿಯುತ್ತಿದ್ದು, ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರಯಾಸದಿಂದ ರಸ್ತೆ ದಾಟುವಂತಾಗಿದೆ. ಕೆರೆ ನೀರಿನ ಹರಿಯುವ ಜಳ ಪ್ರಳಯದ ರಭಸಕ್ಕೆ ರಾಜ್ಯ ಹೆದ್ದಾರಿ 16ರಲ್ಲಿರುವ ಸೇತುವೆ ಕೊಚ್ಚಿಹೋಗಿದೆ.

ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅಂಗೈಯಲ್ಲಿ ಜೀವ ಹಿಡಿಡುಕೊಂಡು ಹೋಗುವಂತಾಗಿದೆ. ಹಗಲು ಹೊತ್ತಿನಲ್ಲಿ ಹೇಗಾದರೂ ಮಾಡಿ ಕಷ್ಟಪಟ್ಟು ವಾಹನ ನಡೆಸಬಹುದು. ಆದರೆ ರಾತ್ರಿಯ ಕತ್ತಲ ಸಮಯದಲ್ಲಿ ಹೋಗೋದು ಕಷ್ಟಸಾಧ್ಯ‌. ಆದ್ದರಿಂದ ಅನಾಹುತದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ವಾಹನ ನಡೆಸಬೇಕಾಗಿದೆ.

ಹೀಗಾಗಲೇ ಇಲ್ಲಿ ಹಲವಾರು ಅವಘಡಗಳು ಸಂಭವಿಸಿದರು ಕೂಡ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ನಮಗೇನು ಸಂಭಂದವೇ ಇಲ್ಲಾ ಎನ್ನುವ ರೀತಿಯಲ್ಲಿ ಇದ್ದಾರೆ. ಒಂದು ಸೂಚನಾ ಫಲಕ ಹಾಕುವ ಗೋಜಿಗೂ ಇಲಾಖೆ ಮನಸ್ಸು ಮಾಡದಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನಷ್ಟು ಅನಾಹುತಗಳು ಸಂಭವಿಸಿ ಪ್ರಾಣ ಹಾನಿ ಆಗುವುದಕ್ಕೂ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Source : Publictv.in