ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಕರುನಾಡಿನ ಹದಿನಾರು ಯೋಧರ ಬಗ್ಗೆ ನಿಮಗೆಷ್ಟು ಗೊತ್ತು…!?

ಕಾರ್ಗಿಲ್ ಎಂದ ತಕ್ಷಣ ಪ್ರತಿಯೊಬ್ಬ ಭಾರತೀಯರ ಮೈ ರೋಮಾಂಚಕ ಆಗುತ್ತದೆ. ಮೊದಲು ನಮ್ಮ ಕಣ್ಣ ಮುಂದೆ ಬರುವುದೇ ಭಾರತ-ಪಾಕಿಸ್ತಾನ ಯುದ್ಧ..!!

ಪಾಪಿ ಪಾಪಿಸ್ತಾನ ತನ್ನ ಮೋಸದಿಂದ ಭಾರತದ ಗಡಿ ಆಕ್ರಮಿಸಿದ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯದ ನಗೆ ಬೀರಿದ ಭಾರತೀಯ ಸೈನಿಕರ ತ್ಯಾಗ ಮಾಡಿದ ದಿನವನ್ನು “ವಿಜಯ ದಿನ” ಎಂದು ಕರೆಯುತ್ತಾರೆ.

ಜುಲೈ 26ರಂದು ವಿಜಯ ದಿನವನ್ನು ಎಲ್ಲ ಭಾರತೀಯರು ಸಂಭ್ರಮದಿಂದ ಆಚರಿಸುತ್ತೆವೆ. 1999ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉತ್ತರ ಗಡಿ ಭಾಗದಲ್ಲಿರುವ ಕಾರ್ಗಿಲ್ ಬೆಟ್ಟವನ್ನು ಪಾಪಿ ಪಾಕಿಸ್ತಾನಿ ಯಾರಿಗೂ ಒಂದು ಸುಳಿವು ಸಿಗದ ರೀತಿಯಲ್ಲಿ ಪಾಪಿ ಪಾಕಿಸ್ತಾನದ ಸೈನಿಕರು ವಶಪಡಿಸಿಕೊಂಡಿದ್ದರು.

ಬೆಟ್ಟದ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡ ಪಾಕಿಸ್ತಾನ ಭಾರತ ದೇಶದ ಸಾವಭೌಮತ್ವವನ್ನೇ ಪ್ರಶ್ನೆ ಮಾಡಿತ್ತು. ಅಂತಹ ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಪಾಪಿ ಪಡೆಯನ್ನು ಒದ್ದೋಡಿಸುವುದು  ಭಾರತೀಯ ಸೈನಿಕರಿಗೆ ಅಷ್ಟು ಮಾತಾಗಿರಲಿಲ್ಲ. ಸುಧೀರ್ಘ 60 ದಿನಗಳ ಕಾಲ ಶತ್ರುಗಳೊಂದಿಗೆ ಕಾದಾಡಿದ ಭಾರತೀಯ ಸೈನಿಕರು 1999ರ ಜುಲೈ 26ರಂದು ಪಾಕಿಸ್ತಾನದ ಸೈನಿಕರನ್ನು ದೇಶದ ಗಡಿಯಿಂದ ಅಟ್ಟಾಡಿಸಿ ಒದ್ದು ಓಡಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಈ ಯುದ್ಧದಲ್ಲಿ ಭಾರತ ಮಾತೆಯ 527 ವೀರ ಪುತ್ರರು ಯೋಧರು ಹುತಾತ್ಮರಾದರು. ಸಾವಿರಾರು ಜನ ಯೋಧರು ಯುದ್ಧದಲ್ಲಿ ಗಾಯಗೊಂಡರು. ದೇಶದ ನೆಲ, ಜಲದ ವಿಷಯಕ್ಕೆ ಬಂದಾಗ ರಕ್ಷಣೆ ನೀಡುವ ವಿಚಾರದಲ್ಲಿ  ಸದಾ ಒಂದು  ಹೆಜ್ಜೆ ಮುಂದೆ ಇರುವ ಕರ್ನಾಟಕದ ಹದಿನಾರು(16) ಮಂದಿ ಯೋಧರು ಈ ಯುದ್ಧ ಭೂಮಿಯಲ್ಲಿ ಹುತಾತ್ಮರಾಗಿ ವೀರಸ್ವರ್ಗವನ್ನು ಅಪ್ಪಿದರು.

ಹುತಾತ್ಮರಾದ ಸೈನಿಕರು : ಬೆಳಗಾವಿಯ ದೋಂಡಿಭಾಯ್ ದೇಸಾಯಿ, ಕೊಪ್ಪಳದ ಶಿವಬಸವಯ್ಯ, ಮಡಿಕೇರಿಯ ಎಸ್.ಕೆ.ಮೇದಪ್ಪ, ಕೊಪ್ಪಳದ ಸಿ.ಎಂ.ಮಲ್ಲಯ್ಯ, ಮಡಿಕೇರಿಯ ಪಿ.ಡಿ.ಕಾವೇರಪ್ಪ, ಬೆಳಗಾವಿಯ ಯಶವಂತ ಡಿ.ಕೋಳ್ಕರ್, ಬಾಗಲಕೋಟೆಯ ದಿಲೀಪ್ ಪಿ.ಪೂತರಾಜ್, ಬೆಳಗಾವಿಯ ಭರತ್ ಮಸ್ಕಿ, ಬಸಪ್ಪ ಚೌಗಲೆ,  ಬಾಗಲಕೋಟೆಯ ಶಂಕರಪ್ಪ ಕೋಟಿ, ಬೆಳಗಾವಿಯ ಬಾಹುಬಲಿ ಬರಮಪ್ಪ, ಮಂಡ್ಯದ ಬಿ.ಕೆ.ಸುಧೀರ್, ಬಾಗಲಕೋಟೆಯ ಅಶೋಕ ಭೀಮಪ್ಪ ಜಾದವ್, ಬೆಂಗಳೂರಿನ ಅಜಿತ್ ಭಂಡಾರ್ಕರ್, ಬಿಜಾಪುರದ ದಾವಲ್ಲಾ, ಮಡಿಕೇರಿಯ ಎಚ್.ವಿ.ವೆಂಕಟ ಸೇರಿದಂತೆ 16 ಜನ ವೀರಯೋಧರು 16 ಸಾವಿರ ಅಡಿ ಎತ್ತರದ ಶಿಖರವನ್ನು ಕಾಪಾಡಿಕೊಳ್ಳುವುದಕ್ಕಾಗಿ ತಮ್ಮ ಪ್ರಾಣ ತಾಯಿ ಭಾರತಾಂಬೆಯ ಪಾದಕ್ಕೆ ಅರ್ಪಣೆ ಮಾಡಿದರು.

ಗಾಯಗೊಂಡ ಯೋಧರು :
ಉತ್ತರಕನ್ನಡ ಜಿಲ್ಲೆ ರಮಾಕಾಂತ್ ಸಾವಂತ್, ಧಾರವಾಡದ ಬಸಪ್ಪ ತಳವಾರ್, ಬೈಲಹೊಂಗಲದ ಮಲ್ಲಪ್ಪ ಮುನವಳ್ಳಿ ಸೇರಿದಂತೆ ಇನ್ನೂ ಹಲವಾರು ವೀರ ಯೋಧರು ಗಾಯಗೊಂಡಿದ್ದರು.

ಇವರೆಲ್ಲರು ನಮಗಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ಮತ್ತೆ ಮತ್ತೆ ನೆನಪಿಸುವ ದಿನವೇ ಈ ಕಾರ್ಗಿಲ್ ವಿಜಯ ದಿವಸ್. ಜುಲೈ 26ರಂದು ಕಾರ್ಗಿಲ್‌ನ ದ್ರಾಸ್‌ನಲ್ಲಿ ಹಾಗೂ ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕ್ರಮವಾಗಿ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಇಂಡಿಯಾ ಗೇಟ್ ಹತ್ತಿರ ರಾಷ್ಟ್ರದ ಪ್ರಧಾನಿ ‘ಅಮರ್ ಜವಾನ್’ ಜ್ಯೋತಿಗೆ ಗೌರವ ವಂದನೆ ಸಲ್ಲಿಸುತ್ತಾರೆ.

ಇಷ್ಟು ಮಾತ್ರವಲ್ಲ ದೇಶದ ಎಲ್ಲ ಭಾಗಗಳಲ್ಲೂ ವಿಜಯ್ ದಿವಸ್ ಆಚರಿಸಲ್ಪಡುತ್ತದೆ. ಇದಕ್ಕೆ ಬೆಂಗಳೂರು ಹೊರತಲ್ಲ. ನಗರದ ಸೈನಿಕ ಸ್ಮಾರಕದಲ್ಲಿ ಅಂದು ಯೋಧರ ತ್ಯಾಗವನ್ನು ಸ್ಮರಿಸುವ ಜೊತೆಗೆ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸುವ ಅನೇಕ ಕಾರ್ಯಕ್ರಮಗಳು ನಡೆಯತ್ತವೆ.

ವೀರಯೋಧ ದವಲಸಾಬ ಪರಾಕ್ರಮ

ಕಾರ್ಗಿಲ್ ಯುದ್ಧದಲ್ಲಿ ವೈರಿ ಪಡೆಯೊಂದಿಗೆ ಕೆಚ್ಚೆದೆಯಿಂದ ಹೋರಾಡಿ ಯುದ್ಧ ಮಾಡುತ್ತಲೇ ಯುದ್ಧ ಭೂಮಿಯಲ್ಲಿ ಹುತಾತ್ಮನಾದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಡ ಎಂಬ ಹಳ್ಳಿಯ ಯುವಕ ದಾವಲಸಾಬ ನಬಿಸಾಬ ಕಂಬಾರ(27) ಎಲ್ಲರಲ್ಲೂ ದೇಶ ಭಕ್ತಿ ಉಕ್ಕಿಸುತ್ತಾರೆ.

ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದ ಕಂಬಾರ ಗಡಿ ರಕ್ಷಣಾ ಪಡೆ(BSF)ಗೆ ಸೇರಿದ್ದರು. ಸರಿ ಸುಮಾರು 7 ವರ್ಷಗಳ ಕಾಲ ಅವರು ಕಾರ್ಗಿಲ್ ಗಡಿ ಪ್ರದೇಶದಲ್ಲಿ ಸೇವೆ ಪೂರೈಸಿದ್ದರು. ಫೈರಿಂಗ್‌ನಲ್ಲಿ ನಿಸ್ಸಿಮ್ಮನಾಗಿದ್ದ ದಾವಲಸಾಬನವರಿಗೆ ಶತ್ರು ಪಡೆಗಳನ್ನು ಸಂಹಾರ ಮಾಡುದ ಜವಾಬ್ದಾರಿಯನ್ನು ಕೊಡಲಾಗಿತ್ತು.  141 BSF ಬಟಾಲಿಯನ್‌ನಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಇವರಿಗೆ ಕಾರ್ಗಿಲ್ ಯುದ್ಧದ ಸಮಯದಲ್ಲಿಯೇ ಶತ್ರು ಸೈನಿಕರಿಂದ ತೂರಿಬಂದ ಗುಂಡು ವೀರ ಯೋಧನ ಕಾಲಿಗೆ ತಗುಲಿತ್ತು.

ಅಷ್ಟಾದರೂ ಧೃತಿಗೆಡದೆ ಕಾಲಿಗೆ ಬಟ್ಟೆ ಕಟ್ಟಿಕೊಂಡು ಮತ್ತೆ ಶತ್ರು ಸೈನಿಕರತ್ತ ಗುಂಡಿನ ಸುರಿಮಳೆಗರೆದು 3 ಶತ್ರಗಳನ್ನು ಬಲಿತೆಗೆದುಕೊಂಡಿದ್ದರು. ಆಮೇಲೆ ಶತ್ರು ಸೈನಿಕರಿಂದ ಬಂದ ಗುಂಡು ಯೋಧ ದಾವಲಸಾಬನ ಕಣ್ಣು ಗುಡ್ಡೆಯ ಮೇಲ್ಭಾಗದ ಹಣೆ ಹಾಗೂ ಎದೆಗೆ ತಗುಲಿ 13-6-1999ರಲ್ಲಿ ವೀರ ಹುತಾತ್ಮರಾದರು. ದೇಶಪ್ರೇಮಕ್ಕೆ ತೆಲ ಭಾಗಿ ದೇಶದ ವಿವಿಧ ಮೂಲಗಳಿಂದ 25,11,000 ಸಹಾಯ ಧನ ದಾವಲಸಾಬನವರ ಕುಟುಂಬಕ್ಕೆ ಹರಿದು ಬಂತು ದಾವಲಸಾಬನ ಮೂವರು ತಮ್ಮಂದಿರು ಮದುವೆಯಾಗಿ, ತಾಯಿಯೊಂದಿಗೆ ವಾಸವಾಗಿದ್ದಾರೆ.

ಮುದ್ದೇಬಿಹಾಳದಲ್ಲಿ ತಂಗಡಗಿ ರಸ್ತೆ ಬದಿಯಲ್ಲಿ ಬೃಹತ್ ಮನೆಯೊಂದನ್ನು ನಿರ್ಮಿಸಿಕೊಂಡಿರುವ ಮನೆಗೆ “ವೀರಯೋಧ ದಾವಲಸಾಬ ಕಾರ್ಗಿಲ್ ಮಂಜಿಲ್” ಎಂದು ಹೆಸರಿಟ್ಟಿದ್ದಾರೆ. ಬಿಜಾಪುರದ BLDE ವತಿಯಿಂದ ಸಂಸ್ಥೆಯವರು 50 ಸಾವಿರ ದೇಣಿಗೆ ನೀಡಲು ಮುದ್ದೇಬಿಹಾಳಕ್ಕೆ ತೆರಳಿದ ಸಂದರ್ಭದಲ್ಲಿ ದಾವಲಸಾಬನ ಕುಟುಂಬ ಒಬ್ಬರಿಗೆ ನೌಕರಿ ನೀಡುವಂತೆ ಕೇಳಿಕೊಂಡಿತ್ತು. ಅದ್ದರಿಂದ ದಾವಲಸಾಬನ ಕಿರಿಯ ತಮ್ಮ ಶಹಜಾನನಿಗೆ ಬಿಜಾಪುರದಲ್ಲಿ BLDE ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುಮಾಸ್ತ ಕೆಲಸವನ್ನೂ ನೀಡಿದೆ.

ದಾವಲಸಾಬನ ತಮ್ಮಂದಿರಾದ ಲಾಡಸಾಬ ಹಾಗೂ ನಬಿಸಾಬ ಮುದ್ದೇಬಿಹಾಳದಲ್ಲಿ “ಕಾರ್ಗಿಲ್ ಅಟೋಮೊಬೈಲ್” ಗ್ಯಾರೇಜ್ ನಡೆಸುತ್ತಿದ್ದಾರೆ. ಸಾರ್ವಜನಿಕರು ಮುದ್ದೇಬಿಹಾಳ ಹಳೆ ತಹಸೀಲ್ದಾರ್ ಕಚೇರಿ ಎದುರು ಸೈನಿಕ ಮೈದಾನ ಸ್ಮಾರಕ ನಿರ್ಮಿಸಿದ್ದಾರೆ. ಮೈದಾನದಲ್ಲಿ ವೀರಯೋಧ ದಾವಲಸಾಬನ ಹೆಸರು ಮೊದಲು ಕೆತ್ತಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ವಿವಿಧೆಡೆಯ ಯೋಧರ ಹೆಸರುಗಳನ್ನೂ ಕಲ್ಲಿನಲ್ಲಿ ಕೆತ್ತಲಾಗಿದೆ.

ಹೆಮ್ಮೆಯಿದೆ

“ನಾವು ಟೈಗರ್ ಹಿಲ್ ದ್ರಾಸ್ ಸೆಕ್ಟರ್‌ನಲ್ಲಿದ್ದೆವು. ಮೊದಲು ಇಲ್ಲಿಯೇ ಯುದ್ಧ ಆರಂಭವಾದರೂ ನಂತರ ಅದು ಕಾರ್ಗಿಲ್‌ನಲ್ಲಿ ಅತಿಕ್ರಮಣದ ವಿರುದ್ಧ ಹೋರಾಟ ಆರಂಭವಾಗಿದ್ದರಿಂದ ‘ಕಾರ್ಗಿಲ್ ಆಪರೇಷನ್‌’ ಎಂದು ಕರೆಯಲಾಯಿತು. ನಾವು ಅಲ್ಲಿ ಪ್ರಾಣದ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ನಮ್ಮ ಮುಂದೆ ಇದ್ದ ಗುರಿಯೊಂದೆ ಶತ್ರುಗಳನ್ನು ಸಂಹರಿಸೋದು. ಹಾಗಾಗಿ, ನಾವು ಸಾಯಲು ಸಿದ್ಧವಾಗಿಯೇ ಹೋರಾಟಕ್ಕೆ ದುಮಿಕಿದೆವು. ನಂತರ ಯುದ್ಧ ಗೆದ್ದು ದೇಶದ ಗೌರವ ಕಾಪಾಡಿದ ಹೆಮ್ಮೆ ನಮ್ಮದಾಯಿತು. ಇದು ಕಾರ್ಗಿಲ್ ಆಪರೇಷನ್ ಯುದ್ಧದಲ್ಲಿ ಹೋರಾಡಿ, ನಿವೃತ್ತಿಯ ಬದುಕು ಸಾಗಿಸುತ್ತಿರುವ ಕೊಪ್ಪಳ ತಾಲೂಕಿನ ಮುದ್ಲಾಪುರದ “ಮಹಾಲಿಂಗಯ್ಯ ಹಿರೇಮಠ” ಅವರ ಮನಸಿನಾಳದ ಮಾತು. ಇದರಿಂದ ನಮಗೆ ಗೌರವವೇ ಹೆಚ್ಚಾಯಿತು ಎನ್ನುತ್ತಾರೆ. ಗೆದ್ದ ಸಂತಸ ನಮ್ಮನ್ನು ಇನ್ನೂ ಹುರಿದುಂಬಿಸಿತು. ಅದೊಂದು ಅದ್ಭುತ ಅನುಭವ ಮತ್ತು ಶ್ರೆಯಸ್ಸು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹಿರೇಮಠ.

ಸಂದೇಶವಾಹಕ…

ಯುದ್ಧಭೂಮಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಸಂಸತ್‌ಗೆ ಕಾಲಕಾಲಕ್ಕೆ ಮಾಹಿತಿಯನ್ನು ತಲುಪಿಸುವ ಜವಾಬ್ದಾರಿ ಭಾರತೀಯ ಸೇನೆಯ ಸಂವಹನ ವಿಭಾಗದ್ದು. ಸೇನೆ ಭಾಷೆಯಲ್ಲಿ ಇದಕ್ಕೆ “ಕೋರ್ ಆಫ್ ಸಿಗ್ನಲ್” ಎಂದು ಹೆಸರಿಡಲಾಗಿದೆ. ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಕ್ಷಣಕ್ಷಣಕ್ಕೂ ನಡೆಯುವ ವಿದ್ಯಮಾನ ಹೊರಜಗತ್ತಿಗೆ ತಿಳಿಸುವುದು ಈ ವಿಭಾಗದ ಜವಾಬ್ದಾರಿ.

ಇವರು ಯುದ್ಧರಂಗದಲ್ಲೂ ಇರಬೇಕಾಗುತ್ತದೆ. ಹೋರಾಟದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಶತ್ರು ದಾಳಿಯನ್ನು ಎದುರಿಸಿ ಸೈನಿಕರಿಗೆ ಅವಶ್ಯವಾದ ಎಲ್ಲ ವಿಧದ ಮಾಹಿತಿ, ಸಂದೇಶ ರವಾನಿಸುವ ಮಹತ್ತರ ಜವಾಬ್ದಾರಿ ಇವರ ಹೆಗಲಿಗಿರುತ್ತದೆ. ಈ ವಿಭಾಗದಲ್ಲಿ ಕೆಲಸ ನಿರ್ವಹಿಸಿ ಕಾರ್ಗಿಲ್ ವಿಜಯ ದುಂಧುಭಿಯನ್ನು ಜಗತ್ತಿಗೆ ಬಿತ್ತರಿಸಿದವರಲ್ಲಿ ಕನ್ನಡಿಗ “ಕರ್ನಲ್ ಎನ್. ಬಾಲಕೃಷ್ಣ” ಕೂಡ ಒಬ್ಬರು. ಕಾರ್ಗಿಲ್ ಯುದ್ಧ ಭೂಮಿಯಲ್ಲಿ 27 ದಿನಗಳಕಾಲ ಸೇನಾ ಮಾಹಿತಿದಾರನಾಗಿ ಕರ್ನಲ್ ಬಾಲಕೃಷ್ಣರ ತಂಡ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿತ್ತು. ಲಡಾಖ್ ಸ್ಕೌಟ್ ಹೆಸರಿನ ಇವರ ತಂಡ, ಏಪ್ರಿಲ್‌ನಲ್ಲಿ ಕಾರ್ಗಿಲ್‌ಗೆ ಸೇನಾ ವರಿಷ್ಠರ ಸೂಚನೆಯಂತೆ ಧಾವಿಸಿತು. ಲಡಾಕ್ ಸ್ಕೌಟ್‌ಗೆ ಸೇರಿಸುತ್ತಿದ್ದುದು ಹಿಮಪರ್ವತದ ಜನಾಂಗವನ್ನು. ಅವರಿಗೆ ಅಲ್ಲಿನ ಪರ್ವತಗಳ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಎತ್ತರ ಪರ್ವತಗಳಲ್ಲಿ ಕಡಿಮೆ ವಾಯುವಿನಲ್ಲೂ ಜೀವಿಸಿದ ಅನುಭವ ಇರುತ್ತದೆ. ಈ ತಂಡಕ್ಕೆ “ಮೇಜರ್ ಸೋನಂ ವಾಂಗ್ಚುಕ್” ನೇತೃತ್ವ ವಹಿಸಿಕೊಂಡಿದ್ದರು. ಕಾರ್ಗಿಲ್‌ನ ಇಂಡಸ್ ಮತ್ತು ಶೋಕ್ ನದಿ ಮಧ್ಯೆದಲ್ಲಿನ ಚೋರ್ ಬಟ್ಲಾದಲ್ಲಿ ಪಾಕ್ ಸೈನಿಕರು ಜಮಾವಣೆಯಾಗಿದ್ದ ಪಾಕಿಸ್ತಾನ ಸೈನಿಕರನ್ನು ಹಿಮ್ಮೆಟ್ಟಿಸಲಾಯಿತು. ಆ ಘರ್ಷಣೆಯಲ್ಲಿ ನಮ್ಮ ಹವಾಲ್ದಾರ್‌ರೊಬ್ಬರು ವೀರಮರಣವನ್ನಪ್ಪಿದರು.

ಫಿರಂಗಿ ಸೇನಾನಿ

ಕಾರ್ಗಿಲ್ ಯುದ್ಧಭೂಮಿಯಲ್ಲಿ ಫಿರಂಗಿ ಸಿಡಿಸುವ ಕೆಚ್ಚೆದೆಯ ಸಾಹಸವೇ ಸರಿ. ಅಧಿಕಾರಿಗಳ ಸೂಚನೆಯಂತೆ ಗುರಿ ತಪ್ಪದ ಹಾಗೆ ಫಿರಂಗಿ ಪ್ರಯೋಗ, ವೈರಿಗಳ ಹೊಡೆದೂರುಲಿಸುವಳ್ಳಿ ಯಶಸ್ಸು ಸಾಧಿಸಿದ “ಕೆ. ಸುಬ್ರಹ್ಮಣ್ಯ ಹೆಬ್ಬಾರ್” 93 FD ರೆಜಿಮೆಂಟ್‌ನ ಸೈನಿಕ. ಅಂದರೆ ಇವರದು ತೋಫಕಾನ್ ಕೇಂದ್ರ. ಹೆಬ್ಬಾರ್ ಜೊತೆ ಯುದ್ಧಭೂಮಿಯಲ್ಲಿ ನಾಲ್ವ ಜನ ಯೋಧರು ಕನ್ನಡಿಗರಿದ್ದರು. ಇದೆಲ್ಲ ಗೊತ್ತಾದುದು ಯುದ್ಧ ಮುಗಿದ ನಂತರವೇ. ಯುದ್ಧ ಕಾಲದಲ್ಲಿ ಏನಿದ್ದರೂ ವೈರಿಗಳನ್ನು ಸಂಹರಿಸುವುದಷ್ಟೇ ಗಮನ! ಫಿರಂಗಿ ಮುನ್ನಡೆಸುತ್ತಾ ಇವರಿದ್ದ 7 ಮಂದಿಯ ಉಡಿ ಘಟಕ ಗನ್ ಚಾಲನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿತ್ತು.

ಮೇಲಧಿಕಾರಿ ರವಾನಿಸುವ ಕರಾರುವಾಕ್ ಗುರಿಗೆ ಮದ್ದು ಗುಂಡು ಉಡಾಯಿಸುವುದಷ್ಟೇ ಇವರ ಮುಖ್ಯ ಕೆಲಸ. ಅದು ಗುರಿ ತಲುಪಿರುವುದನ್ನು ಮೇಲಧಿಕಾರಿಗಳೇ ಖಚಿತಪಡಿಸುತ್ತಿದ್ದರು. ಸೈನ್ಯಕ್ಕೆ ಪರ್ವತದ ಮೇಲೇರಲು ಉಡಿ ಘಟಕ ಅವಕಾಶ ಕಲ್ಪಿಸುತ್ತಿತ್ತು. ಕಾರ್ಗಿಲ್ ಕದನ ಮುಗಿಸಿ ಉಡಿ ಘಟಕದ ಸೈನಿಕರು ಇತರರೊಂದಿಗೆ ಶ್ರೀನಗರಕ್ಕೆ ಸೇನಾ ಟ್ರಕ್‌ನಲ್ಲಿ ವಾಪಸಾಗುತ್ತಿದ್ದರು. ಕಾರ್ಗಿಲ್‌ನ ಕಡಿದಾದ ಹಾದಿಯಲ್ಲಿ ಮಳೆಯಲ್ಲಿ ಸಾಗುತ್ತಿರಬೇಕಾದರೆ ಟ್ರಕ್ ಪ್ರಪಾತಕ್ಕೆ ಜಾರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದನ್ನೂ ನೆನಪಿಸಿಕೊಳ್ಳುತ್ತಾರೆ.

– ರಾಘವೇಂದ್ರ ಭಟ್

Source : http://www.kannadaprabha.com/columns/ಕಾರ್ಗಿಲ್-ನೆನಪಿನಲ್ಲಿ-ಕದನ-ಕಲಿಗಳನ್ನು-ನೆನೆಯುತ್ತಾ/85849.html