ರಾಜಕೀಯರಾಜ್ಯಸುದ್ದಿ ಜಾಲ

ಬರೋಬ್ಬರಿ 27 ಕಿಮೀ. ಬೆನ್ನಟ್ಟಿ ಆರೋಪಿಗಳನ್ನು ಹಿಡಿದ ಪೋಲಿಸರು..!!

ಮಂಗಳೂರು: ಸಿನಿಮಾಗಳಲ್ಲಿ ರೌಡಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವುದನ್ನು ನಾವು ನೀವು ನೋಡಿದ್ದೇವೆ. ಇಂತಹ ದೃಶ್ಯ ಸಿನಿಮಾದಲ್ಲಿ ನೋಡಲು ಎಷ್ಟು ಥ್ರಿಲ್ಲಿಂಗ್ ಆಗಿರುತ್ತದೆ ಅಂತ ನಮಗೆ ಚನ್ನಾಗಿ ಗೊತ್ತು. ಅದೇ ರೀತಿಯಾಗಿ ಪೊಲೀಸರು “ದೀಪಕ್ ರಾವ್” ಹತ್ಯೆಯಾದ 3.30 ಗಂಟೆಯ ಒಳಗಡೆ ನಾಲ್ಕು ಆರೋಪಿಗಳನ್ನು ಕಾರಿನಲ್ಲಿ 27 ಕಿ.ಮೀ ಬೆನ್ನತ್ತಿ ಆರೋಪಗಳನ್ನು ಬಂಧಿಸಿದ್ದಾರೆ.

ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೀಪಕ್ ರಾವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ತಪ್ಪಿಸಿಕೊಳ್ಳುತ್ತಿದ್ದರು.

ಮಧ್ಯಾಹ್ನ ಹತ್ಯೆಯಾದ ನಂತರ ಸಮೀಪದ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಸುತ್ತಮುತ್ತಲಿನ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದರು. ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ಆಗಮಿಸಿತು. ನಿಲ್ಲಿಸುವಂತೆ ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಹೋಯಿತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರಿಗೆ ಅನುಮಾನ ಬಂತು.

ಆರಂಭವಾಯ್ತು ಚೇಸಿಂಗ್ :

ಕಾರು ನಿಲ್ಲಿಸದೆ ಬೇಕಾಬಿಟ್ಟಿಯಾಗಿ ಓಡಿಸುತ್ತಾ ತಪ್ಪಿಸಿಕೊಂಡು ಹೋಗುತ್ತಿದ್ದದನ್ನು ಕಂಡ ಮೂಲ್ಕಿ ಪೋಲೀಸರು ಎಚ್ಚೆತ್ತುಕೊಂಡು ಖಾಸಗಿ ಕಾರ್ ಒಂದನ್ನು ಬಾಡಿಗೆಗೆ ಪಡೆದುಕೊಂಡು ದುಷ್ಕರ್ಮಿಗಳ ಕಾರನ್ನು ಬೆನ್ನಟ್ಟುವುದಕ್ಕೆ ಶುರು ಮಾಡಿದರು. ಆ ಮಧ್ಯೆ ಆರೋಪಿಗಳು ಕಿನ್ನಿಗೋಳಿಯಿಂದ ದಾಬಸ್‍ಕಟ್ಟೆ, ಪಟ್ಟೆಕ್ರಾಸ್, ಕದ್ರಿ ಪದವು, ನಿಡ್ಡೋಡಿ ಮಾರ್ಗವಾಗಿ ಸಂಚರಿಸಿ ಧೂಮಚಡವು ಕ್ರಾಸ್‍ಗೆ ಹೋಗಿ ಅಲ್ಲಿಂದ ಮಿಜಾರುಗುತ್ತು ದೋಟದ ಮನೆ ಮೂಲಕ ತಪ್ಪಿಸಿಕೊಳ್ಳುವುದಕ್ಕೆ ಯೋಜನೆ ಮಾಡಿ ಕೊಂಡಿದ್ದರು.

ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಪೊಲೀಸರು ಆರೋಪಿಗಳಿಗೆ ಕಾರು ನಿಲ್ಲಿಸುವಂತೆ ಹಲವಾರಿ ಬಾರಿ ಸೂಚನೆ ನೀಡಿದರಲ್ಲದೆ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಪೊಲೀಸರ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ಮತಾಂದ ಆರೋಪಿಗಳು ಅತೀವೇಗದಲ್ಲಿ ಸಿಕ್ಕ ಸಿಕ್ಕ ಒಳ ರಸ್ತೆಗಳಲ್ಲಿ ಕಾರನ್ನು ನುಗ್ಗಿಸುತ್ತಿದ್ದರು.

ಹಲಗೆ ಮೇಲೆ ಹೋಗಿ ಸಿಕ್ಕ ಕಾರ್ :

ಮತಾಂದರು ಎಡಪದವು ಸಮೀಪದ ಮಿಜಾರು ಗುತ್ತು ಗರಡಿ ಹಿಂಭಾಗದಲ್ಲಿರುವ ಒಳದಾರಿಯ ಮೋರಿಯೊಂದರ ಮೂಲಕ ಹಾದು ಹೋಗುತ್ತಿದ್ದರು. ಆದರೆ ಈ ಮೋರಿಗೆ ಹಾಕಿದ್ದ ಸೇತುವೆ ಮುರಿದು ಹೋಗಿದ್ದರಿಂದ ತಾತ್ಕಾಲಿಕವಾಗಿ ಜನರ ಓಡಾಟಕ್ಕೆಂದು ಮರದ ಹಲಗೆಯನ್ನು ಹಾಕಿದ್ದರು. ಹಿಂದುಗಡೆಯಿಂದ ಪೊಲೀಸರು ಚೇಸಿಂಗ್ ಮಾಡುತ್ತಿರುವುದನ್ನು ನೋಡಿ ಮತಾಂದರು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲೇಬೇಕೆಂದು ಯೋಚಿಸಿ ಹಲಗೆಯ ಮೇಲೆ ಕಾರು ಚಲಾಯಿಸಿದ್ದಾರೆ. ಕಾರಿನ ಭಾರವನ್ನು ತಾಳಲಾರದೇ ಹಲಗೆ ಮುರಿದು ಕಾರು ಮೋರಿಯೊಳಗೆ ಸಿಕ್ಕಿಕೊಂಡಿತ್ತು. ಕಾರು ಹಿಂದಕ್ಕೂ ಮುಂದಕ್ಕೂ ಓಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು.

ಕಾರು ಮುಂದಕ್ಕೆ ಹೋಗುವುದಿಲ್ಲ ಎಂದು ತಿಳಿದ ಮತಾಂದರು, ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಚಿಕ್ಕ ಸ್ಥಳದಲ್ಲಿ ಕಾರು ಸಿಲುಕಿಕೊಂಡಿದ್ದ ಕಾರಣ ಮತಾಂದರಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಆರೋಪಿಗಳ ಹಿಂದೆಯೇ ಬಂದ ಪೊಲೀಸರ ತಂಡವು ಕಾರಿನ ಮೇಲೆ ಫೈರಿಂಗ್ ಮಾಡಿ ಹೆದರಿಕೆಯನ್ನು ಹುಟ್ಟಿಸಿತ್ತು.

ಆರೋಪಿಗಳು ಈ ದಾರಿ ಮೂಲಕ ಪರಾರಿಯಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಇನ್ನೊಂದು ಕಡೆಯಿಂದ ಬಜಪೆಯ ಠಾಣೆ ಪೊಲೀಸರು ಕೂಡ ಪ್ರತ್ಯೇಕ ವಾಹನವೊಂದರಲ್ಲಿ ಸ್ಥಳಕ್ಕೆ ಆಗಮಿಸಿದ್ದರು. ಮತ್ತೊಂದು ಕಡೆಯಿಂದ ಮೂಡಬಿದಿರೆ ಠಾಣೆ ಪೊಲೀಸರು ಕೂಡ ಅದೇ ಜಾಗಕ್ಕೆ ಬಂದಿದ್ದಾರೆ. ಕೊನೆಗೆ ಆರೋಪಿಗಳನ್ನು ಪೊಲೀಸರು ಸುತ್ತುವರಿದಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ ನಾಲ್ವರ ಪೈಕಿ ಓರ್ವ ತನ್ನ ಬಳಿಯಿದ್ದ ತಲ್ವಾರಿನಿಂದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಇನ್ಸ್ ಪೆಕ್ಟರ್ ಒಬ್ಬರ ಕೈಗೂ ಸಣ್ಣ-ಪುಟ್ಟ ಗಾಯವಾಗಿತ್ತು. ಎರಡು ಬಾರಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಮತ್ತೆ ನಾವು ಸ್ಥಳದಿಂದ ಪರಾರಿಯಾದರೆ ಗ್ಯಾರಂಟಿ ಶೂಟೌಟ್ ಮಾಡುತ್ತಾರೆ ಎಂದು ಭಾವಿಸಿದ ಆರೋಪಿಗಳು ಕೊನೆಗೆ ವಿಧಿಯಿಲ್ಲದೇ ಶರಣಾಗಿದ್ದಾರೆ.

ಬಟ್ಟೆ ಬದಲಾಯಿಸಿದ ಮತಾಂದು :

ದೀಪಕ್ ಹತ್ಯೆ ಮಾಡಿ ಕಾಟಿಪಳ್ಳದಿಂದ ತಪ್ಪಿಸಿಕೊಳ್ಳಬೇಕಾದರೆ, ದಾರಿ ಮಧ್ಯೆ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ಮತಾಂದರು ಬದಲಿಸಿದ್ದಾರೆ. ಕೊಲೆ ಮಾಡುವ ಸಂದರ್ಭದಲ್ಲಿ ದೀಪಕ್ ಮೈ ಮೇಲಿನಿಂದ ರಕ್ತವು ದುಷ್ಕರ್ಮಿಗಳು ಧರಿಸಿದ್ದ ಟಿ-ಶರ್ಟ್ ಮೇಲೆ ಚಿಮ್ಮಿತ್ತು. ಇದರಿಂದ ನೋಡುವವರಿಗೆ ನಮ್ಮ ಮೇಲೆ ಅನುಮಾನ ಬರಬಾರದು ಎಂದು ತಾವು ಧರಿಸಿದ್ದ ಬಟ್ಟೆಯನ್ನು ಕಾರಿನಲ್ಲಿಯೇ ಬದಲಿಸಿದ್ದರು. ವಶಪಡಿಸಿಕೊಂಡಿದ್ದ ಸ್ವಿಫ್ಟ್ ಕಾರಿನೊಳಗೆ ರಕ್ತಸಿಕ್ತವಾಗಿದ್ದ ಬಟ್ಟೆಗಳು ಪತ್ತೆಯಾಗಿವೆ.

ಖಾಸಗಿ ಕಾರ್ ಚಾಲಕನ ಸಮಯ ಪ್ರಜ್ಞೆ :

ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ ಮೂಲ್ಕಿ ಪೊಲೀಸರು ಬಾಡಿಗೆಗೆ ಪಡೆದುಕೊಂಡಿದ್ದ ಖಾಸಗಿ ಕಾರಿನ ಚಾಲಕ. ಏಕೆಂದರೆ ಕಿನ್ನಿಗೋಳಿಯಿಂದ ಮಿಜಾರು ಗುತ್ತು ವರೆಗಿನ ಸುಮಾರು 28 ಕಿಮೀ. ಕಡಿದಾದ ಒಳ ದಾರಿಯಲ್ಲಿ ದುಷ್ಕರ್ಮಿಗಳನ್ನು ಬೆನ್ನಟ್ಟಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಕಡಿದಾದ ದಾರಿಯಲ್ಲಿ ಯಾವುದಕ್ಕೂ ಅಂಜದೇ ಧೈರ್ಯವಾಗಿ ಅತೀ ವೇಗದಲ್ಲಿ ಆರೋಪಿಗಳ ಹಿಂದೆಯೇ ಖಾಸಗಿ ಚಾಲಕ ಕಾರನ್ನು ಓಡಿಸಿದ್ದರು. 25 ವರ್ಷದ ಒಳಗಿನ ಯುವ ಚಾಲಕನ ಚಾಣಾಕ್ಷತನ, ಸಮಯ ಪ್ರಜ್ಞೆಯಿಂದ ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಜ್ಞಾತ ಸ್ಥಳದಲ್ಲಿ ವಿಚಾರಣೆ :

ಈ ರೀತಿ ಸಿನಿಮೀಯ ರೀತಿಯಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಮಿಜಾರು ಗುತ್ತುವಿನಿಂದ ಪೊಲೀಸರ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೀಪಕ್ ಕೊಲೆ ವಿಚಾರವಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದೀಪಕ್ ಹತ್ಯೆಗೆ ನಿಜವಾದ ಕಾರಣ ಏನು ಎಂಬುದು ಕೂಡ ಸದ್ಯದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ಮೂಲ : Publictv

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles