ಅಮೇರಿಕಾದಲ್ಲಿನ ವಿಶ್ವ ಧರ್ಮ ಸಮ್ಮೇಳನದಲ್ಲಿ ಘರ್ಜಿಸಿದ ವೀರ ಸನ್ಯಾಸಿ..!! ಭಾರತೀಯರು ಹೆಮ್ಮೆ ಪಡುವ ವಿಷಯ

1893 ರ ಅಮೇರಿಕಾದ ಶಿಕಾಗೋದಲ್ಲಿ ನಡೆದ “ವಿಶ್ವ ಧರ್ಮ ಸಮ್ಮೇಳನ”ದಲ್ಲಿ ಮಾತನಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ” ಅಮೇರಿಕಾದ ನನ್ನ ಸಹೋದರ ಮತ್ತು ಸಹೋದರಿಯರೇ” ಎಂದು ಭಾಷಣ ಆರಂಭಿಸಿದಾಗ ಇಡೀ ಸಭಾಂಗಣ ಎದ್ದು ನಿಂತು ಕರತಾಡನ ಮೊಳಗಿಸಿತು..

ಅಂದು ಭಾರತೀಯರನ್ನು ತುಚ್ಛವಾಗಿ ಕಾಣುವ ದಿನಗಳಿದ್ದವು, ವೀರ ಸನ್ಯಾಸಿಯ ಒಂದೇ ಒಂದು ಭಾಷಣ ಭಾರತವನ್ನು ನೋಡುವ ರೀತಿಯೇ ಬದಲಾಯಿತು.

ಅಲ್ಲಿಯವರೆಗೆ ಯಾರೊಬ್ಬರು ಭ್ರಾತೃತ್ವದ ನೆಲೆಗಟ್ಟಿನ ಮೇಲೆ ಮಾತನಾಡಿರಲಿಲ್ಲಾ..! ಸ್ವಾಮಿ ವಿವೇಕಾನಂದರ ಈ ಮಾತುಗಳು ನರೆದಿದ್ದ ಜನರಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿ ಮಾಡಿತು. ಮುಂದುವರೆಸಿದ ಅವರು ಭಾರತ ದೇಶದ ಹಿರಿಮೆ ಹಿಂದೂ ಧರ್ಮದ ಹಿರಿಮೆಯನ್ನು ನರೆದಿದ್ದ ಸಭಿಕರ ಮನಸ್ಸಿಗೆ ಮುಟ್ಟುವಂತೆ ವಿಸ್ತೃತವಾಗಿ ವಿವರಿಸಿದರು. ಅಲ್ಲಿಯತನಕ ಹಿಂದೂತ್ವದ ಕುರಿತು ತಾತ್ಸಾರದಿಂದ ನೋಡುತ್ತಿರುವರು ಹೊಸ ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿದ್ದು ಇತಿಹಾಸದ ಪುಟಪುಟಗಳಲ್ಲಿ ಅಚ್ಚಲಿಯದೆ ಉಳಿಯುವಂತೆ ಮಾಡಿದ ವಿವೇಕಾನಂದರ ಹೆಗ್ಗಳಿಕೆಯೇ ಸರಿ.

ಚಿಕ್ಕ ಜಗತ್ತು ಮೀರಬೇಕು..!!

ನಾನು ಹಿಂದೂ, ನಾನು ನನ್ನದೇ ಆದ ಚಿಕ್ಕ ಬಾವಿಯಲ್ಲಿ ಕುಳಿತಿದ್ದೇನೆ ಹಾಗೂ ಇಡೀ ಜಗತ್ತೆ ಈ ಚಿಕ್ಕ ಬಾವಿ ಎಂದು ಭಾವಿಸಿದ್ದೇನೆ. ಕ್ರೈಸ್ತರು ಸಹ ತಮ್ಮದೇ ಆದ ಬಾವಿಯಲ್ಲಿ ಕುಳಿತಿದ್ದಾರೆ ಹಾಗೂ ಅದೇ ಅವರ ಜಗತ್ತು ಎಂದು ಭಾವಿಸಿದ್ದಾರೆ. ಮುಸ್ಲಿಮರೂ ಹಾಗೆಯೇ ಅವರು ಚಿಕ್ಕ ಬಾವಿಯಲ್ಲಿ ಕುಳಿತು ಅದೇ ಅವರ ಜಗತ್ತೆಂದು ತಿಳಿದಿದ್ದಾರೆ. ಈ ನಮ್ಮ ಚಿಕ್ಕ ಜಗತ್ತಿನ ಎಲ್ಲ ಅಡೆತಡೆಗಳನ್ನು ನಿವಾರಿಸುವ ದೊಡ್ಡ ಪ್ರಯತ್ನ ಮಾಡುತ್ತಿರುವ ಅಮೇರಿಕಾದ ಪ್ರಯತ್ನಕ್ಕೆ ನಾನು ಧನ್ಯವಾದ ಅರ್ಪಿಸಬಯಸುತ್ತೆನೆ. ಮತ್ತೆ ಆಶಸವಾದಿಯಾಗಿದ್ದೇನೆ, ಭವಿಷ್ಯದ ನಿಮ್ಮೆಲ್ಲ ಉದ್ದೇಶಗಳನ್ನು ಪೂರ್ಣಗೊಳಿಸಲು ದೇವರು ನೆರವಾಗುತ್ತಾನೆಂದು.

ಹಿಂದೂ ಧರ್ಮದ ಉಗಮ : ಹಿಂದೂಗಳು ಅವರ ಧರ್ಮವನ್ನು ದಿವ್ಯಜ್ಞಾನದಿಂದ ಪಡೆದಿದ್ದಾರೆ, ಅದುವೇ ವೇದಗಳು. ಈ ವೇದಗಳಿಗೆ ಆದಿಯೂ ಇಲ್ಲಾ, ಅಂತ್ಯವೂ ಇಲ್ಲಾ. ಹೀಗೆ ಹೇಳಿದರೆ ಇಲ್ಲಿನ ಕೇಳುಗರಿಗೆ ತುಸು ಹಾಸ್ಯಾಸ್ಪದ ಅನ್ನಿಸಬಹುದು. ಪುಸ್ತಕವೊಂದು ಆದಿ ಹಾಗೂ ಅಂತ್ಯ ಇಲ್ಲದೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಬಹುದು. ಆದರೆ ವೇದಗಳೆಂದರೆ ಕೇವಲ ಕೃತಿಗೆ ಮಾತ್ರ ಸೀಮಿತವಾದವುಗಳಲ್ಲಾ. ಬೇರೆ ಬೇರೆ ವ್ಯಕ್ತಿಗಳಿಂದ ಸಂಶೋಧಿತವಾದ ಆಧ್ಯಾತ್ಮಿಕ ನಿಬಂದನೆಗಳ ಭಂಡಾರ ಅವು.

ಸಂಶೋಧನೆಗೂ ಮುಂಚೆ ಗುರುತ್ವಾಕರ್ಷಣೆ ಬಲವಿತ್ತಲ್ಲಾ ಹಾಗೆ ಇದು ಮತ್ತು ಎಲ್ಲ ಮಾನವಕುಲ ಮರೆತು ಹೋದ ಮೇಲೂ ಅವು ಅಸ್ತಿತ್ವದಲ್ಲಿರುತ್ತವೆ. ಆತ್ಮ ಆತ್ಮಗಳ ನಡುವೆ ಮತ್ತು ವ್ಯಕ್ತಿ ವ್ಯಕ್ತಿಗಳ ನಡುವೆ ಆಧ್ಯಾತ್ಮಿಕ ಸಂಬಂಧ ನಿರ್ಧರಿಸುವ ನಿಬಂಧನೆ ಅದರಲ್ಲೇ ಇವೆ. ಎಲ್ಲ ಆತ್ಮಗಳ ತಂದೆ. ಸಂಶೋಧನೆಗೆ ಮುನ್ನ ಇತ್ತು ಮತ್ತು ಒಂದು ವೇಳೆ ಇದನ್ನು ಮರೆತ ಮೇಲೂ ಅದು ಇರುತ್ತದೆ.

ಈ ಸಂಶೋಧನೆ ಮಾಡಿದವರನ್ನು ಋಷಿಗಳು ಎಂದು ಕರೆಯಲಾಗುತ್ತದೆ. ನಾವು ಅವರನ್ನು ಪರಿಪೂರ್ಣ ಮನುಷ್ಯರೆಂದು ಗೌರವಿಸುತ್ತೇವೆ. ಇಲ್ಲಿರುವ ಸಭಿಕರಿಗೆ ತಿಳಿಸಲು ಸಂತೋಷವಾಗುತ್ತದೆ. ಯಾಕೆಂದರೆ, ಈ ಋಷಿಗಳ ಪೈಕಿ ಕೆಲವರು ಮಹಿಳೆಯರೂ ಇದ್ದರು.

ಬೌದ್ಧ ಧರ್ಮದ ಕುರಿತು : ಬುದ್ದಿಸಮ್ ಇಲ್ಲದೆ ಹಿಂದೂಯಿಸಂ ಬದುಕಿರಕಾರದು, ಅದೇ ರೀತಿ ಹಿಂದೂಯಿಸಂ ಇಲ್ಲದೇ ಬುದ್ದಿಸಂ ಇಲ್ಲ. ಹಾಗಾದರೆ, ಈ ಪ್ರತ್ಯೆಕತೆ ನಮಗೆ ಎನನ್ನು ಸೂಚಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹಿಂದೂ ಧರ್ಮದ ತತ್ವಜ್ಞಾನ ಮತ್ತು ಬುದ್ದಿ ಇಲ್ಲದೆ ಬೌದ್ಧ ಧರ್ಮಿಯ ಉಳಿಯಲಾರ. ಹಾಗೆಯೇ, ಬೌದ್ಧರ ಹೃದಯವಂತಿಕೆ ಇಲ್ಲದೇ ಹಿಂದೂ ಧರ್ಮಿಯ ಇರಲಾರ. ಹಿಂದೂ ಮತ್ತು ಬೌದ್ದರ ನಡುವಿನ ಈ ಪ್ರತ್ಯೇಕತೆಯೇ ಭಾರತದ ಅಧಃಪತನಕ್ಕೆ ಕಾರಣವಾಗಿರುವುದು. ಆದ್ದರಿಂದಲೇ ಭಾರತ ಇಂದು ಮೂರು ಕೋಟಿ ಭಿಕ್ಷುಕರಿಂದ ತುಂಬಿದೆ ಮತ್ತು ಸಾವಿರಾರು ವರ್ಷಗಳಿಂದ ದಾಳಿಕೋರರ ಗುಲಾಮಿತನಕ್ಕೊಳಪಟ್ಟಿದೆ. ಅದ್ಭುತ ಬೌದ್ಧಿಕ ಹಿಂದೂಗಳನ್ನು ಮಹೋನ್ನತ ಆತ್ಮ, ಅದ್ಭುತ ಮಾನವೀಯ ಶಕ್ತಿಯಾಗಿರುವ ಬುದ್ಧನೊಂದಿಗೆ ಜೋಡಿಸೋಣ ಬನ್ನಿ‌‌.

ಇದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋನಲ್ಲಿ ಮಾಡಿದ ಭಾಷಣದ ತುಣುಕುಗಳು. ಇಂದು ಹಿಂದೂಧರ್ಮದ ನವೋನವ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವ ಚೈತನ್ಯವನ್ನು ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನ ಇಂದು.

ಎಲ್ಲರಿಗೂ ವೀರ ಸನ್ಯಾಸಿಯ ಜನ್ಮ ದಿನದ ಶುಭಾಶಯಗಳು. ವೀರ ಸನ್ಯಾಸಿ ವೀರ ನುಡಿಗಳನ್ನು ಎಲ್ಲರಿಗೂ ತಲುಪಿಸಿ.

ಜೈ ಹಿಂದ್