‘ಶಾರ್ಟ್ ಮೂವಿ’ ಇಂದ ಬೆಳ್ಳಿತೆರೆ ಬೆಳಗಿದ ಕಾಶಿನಾಥ ಬಗ್ಗೆ ನಿಮಗೆಷ್ಟು ಗೊತ್ತು..??

ಕುಂದಾಪುರದಲ್ಲಿ ಹುಟ್ಟಿದ ಆ ಹುಡುಗನಿಗೆ ಸೈಂಟಿಸ್ಟ್ ಆಗಬೇಕೆಂಬ ಹಂಬಲವಿತ್ತು ಈ ಆಸೆ ಹುಡುಗನಿಗೆ ಹುಟ್ಟಿದ್ದು ಹೇಗೆಂದರೆ ಈ ಹುಡುಗನ ದೊಡ್ಡಪ್ಪ ಅಮೇರಿಕದಲ್ಲಿ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಇದೇ ಕಾರಣಕ್ಕೆ ಈತ ಕುಂದಾಪುರ ಬಿಟ್ಟು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ವಿಜಯಾ ಕಾಲೇಜನ್ನು ಸೇರಿದನು ನಂತರ ಆ ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅನೇಕ ಸಲ ನಟನೆಗಾಗಿ ಹುಡುಗಿಯರು ಮುಂದೆ ಬರದಂತಹಾ ಕಾಲ ಅದಾಗಿದ್ದರಿಂದ ಹಾಗೂ ಮೀಸೆ ತೆಗೆದರೆ ಯಾವುದೇ ಹುಡುಗಿಯ ಸೌಂದರ್ಯವನ್ನೂ ನಾಚಿಸುವಷ್ಟು ಸುಂದರಾಗಿದ್ದ ಈ ಹುಡುಗನು ಅನೇಕ ನಾಟಕಗಳಲ್ಲಿ ಭಾಗವಹಿಸುತ್ತಲೇ ಸಾಗುತ್ತಾ ಇದ್ದಾಗ ಮನಸ್ಸು ಅದಾಗಲೇ ನಿಧಾನವಾಗಿ ಚಲನಚಿತ್ರರಂಗದತ್ತ ಹೊರಳಿತ್ತು.

ಹುಡುಗನ ಹೆಸರು ಕಾಶೀನಾಥ್

ನಂತರ ಈ ಈ ಕಾಶೀನಾಥ್ ಸುರೇಶ್ ಹೆಬ್ಳೀಕರ್ ಜೊತೆಗೆ ಚಲನಚಿತ್ರದ ಮೂಲವಿದ್ಯೆಗಳನ್ನು ಕಲಿತ ನಂತರ ದೊಡ್ಡ ಸ್ಕ್ರೀನಿನ ಚಲನಚಿತ್ರ ತೆಗೆಯುವ ಮುನ್ನ ಪುಟಾಣಿ ಮೂವಿ ತೆಗೆದು ಅದರಲ್ಲಿನ ಸಾಧಕ ಭಾದಕಗಳನ್ನು ಅವಲೋಕಿಸಬೇಕು ಎಂದು ಜೊತೆ ಸ್ನೇಹಿತ ಸುರೇಶನಿಗೆ ಐಡಿಯಾ ಕೊಟ್ಟನು.

ಆ ನಂತರ ರೀಲ್ ಕ್ಯಾಮರಾವನ್ನು ಬಾಡಿಗೆಗೆ ತಂದು 1975 ಕ್ಕೂ ಮೊದಲೇ ಅಂದರೆ ಕಾಶೀನಾಥ್ ಗೆ 24 ವಯಸ್ಸು ಆಗುವುದಕ್ಕೂ ಮುನ್ನವೇ ಮೊಟ್ಟ ಮೊದಲ ಬಾರಿಗೆ ಶಾರ್ಟ್ ಮೂವಿ ತೆಗೆದಿದ್ದನು !

ಮೂವಿಯ ಹೆಸರು “ಸ್ಲಿಪ್”

ಈ ಮೂವಿಯನ್ನು ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ಬ್ರಿಟಿಷ್ ಚಲನ ಚಿತ್ರ ಅವಲೋಕಕರ ಮುಂದೆ ಇಟ್ಟನು !

ಆಗ ಆ ಚಿತ್ರ ವಿಮರ್ಶಕರು ಇದೆಂತಹಾ ಡಬ್ಬಾ ಚಿತ್ರ ಎಂದು ಹೀಯಾಳಿಸಿದ್ದರು ಆದರೆ ಆ ಹೀಯಾಳಿಕೆಯು ನವಯುವಕ ಕಾಶೀನಾಥನಲ್ಲಿ ಕಿಂಚಿತ್ತೂ ಬೇಸರವನ್ನು ತರಲೇ ಇಲ್ಲ !

ಬೇರೊಬ್ಬರಾಗಿದ್ದರೆ ಅಂದೇ ಆ ರೀಲಿನ ಮ್ಯಾಗಜಿನ್ ಡಬ್ಬಾವನ್ನು ಬೀದಿಗೆಸೆದು ಕಣ್ಣೀರು ಹಾಕಿ ಓಡಿಬಿಡುತ್ತಿದ್ದರು ಆದರೆ ಅಮೇರಿಕದಲ್ಲಿ ಸೈಂಟಿಸ್ಟ್ ಆಗಬೇಕಿದ್ದ ಕಾಶಿನಾಥ್ ನಿಜವಾದ ಸೈಂಟಿಸ್ಟ್ ಆದದ್ದು ಅದೇ ಕಬ್ಬನ್ ಪಾರ್ಕಿನ ಮುಂಭಾಗದಲ್ಲಿ ಅಂದಿನಿಂದಲೇ ಹೌದು !

ನಂತರ ಈ ಕಾಶೀನಾಥ್ 1975 ರಲ್ಲಿ ದೊಡ್ಡ ಚಲನಚಿತ್ರದೊಂದಿಗೆ ಕನ್ನಡ ಚಲನಚಿತ್ರ ರಂಗಕ್ಕೆ ಕಾಲಿಟ್ಟನು .

ಮುಂದಿನ ದಿನಗಳಲ್ಲಿ ತನ್ನದೇ ಪ್ರತ್ಯೇಕ ಛಾಪು ರೂಪಿಸಿ ತನ್ನದೇ ಆದ ನೋಡುಗರನ್ನು ಯಶಸ್ವಿಯಾಗಿ ಸೃಷ್ಟಿಸಿಕೊಂಡನು, ಮೊದಲ ಹೀಯಾಳಿಕೆಯನ್ನು ಬಟಕ್ಕನೆ ಬಡಿದು ಬದಿಗಿಕ್ಕಿ ಮೊದಲ ಪುಟಾಣಿ ಚಿತ್ರದ ತಪ್ಪುಗಳೆಲ್ಲವನ್ನು ಸರಿಪಡಿಸಿಕೊಳ್ಳುತ್ತಾ ಸ್ವತಂತ್ರವಾಗಿ ಅಸಾಮಾನ್ಯವಾಗಿ ಹೆಸರು ಪಡೆದ ವ್ಯಕ್ತಿಗಳಲ್ಲಿ ಈತನೂ ಒಬ್ಬ.

ಸಾಮಾನ್ಯ ವ್ಯಕ್ತಿಯನ್ನೇ ಈತನು ಚಲನಚಿತ್ರಗಳಲ್ಲಿ ತೋರಿಸುತ್ತಾ ಹೋದನೇ ಹೊರತು ಈಗಿನವರಂತೆ ಚಲನಚಿತ್ರಕ್ಕೂ ಸಾಮಾನ್ಯ ಜೀವನಕ್ಕೂ ಬಹಳ ಅಜಗಜಾಂತರ ಇದೆ ಎಂಬಂತೆ ಭಾಸವಾಗದಂತೆ ಚಿತ್ರ ಕಟ್ಟುತ್ತಿದ್ದರಲ್ಲಿ ಈತ ಎತ್ತಿದ ಕೈ ಆಗಿದ್ದನು .

ಮುಂದಿನದೆಲ್ಲಾ ನಾ ಹೇಳುವುದೇ ಬೇಕಿಲ್ಲ ನಿಮಗೆಲ್ಲಾ ತಿಳಿದೇ ಇದೆ .

ಶಾರ್ಟ್ ಮೂವಿ ಮಾಡಿ ಏನು ಕಿತ್ತು ಗುಡ್ಡೆ ಹಾಕ್ತೀಯಪ್ಪಾ ಎನ್ನುವವರಿಗೆ ಈತನ ಕಥೆ ಒಂದು ಮಾದರಿ ಅಷ್ಟೇ !🙏🏻

ಬರಹ – Umeshchar Kb