ಕೆಲವರು ಊಟ ಬಿಟ್ಟ ಮಾತ್ರಕ್ಕೆ ಸ್ವತಂತ್ರ ಬರಲಿಲ್ಲ ನೇತಾಜಿಯಂತವರುರಕ್ತ ಕೊಟ್ಟಿದ್ದಿದೆ.!

‘ಮೊದಲು ಇತಿಹಾಸ ನಿರ್ಮಾಣ ಮಾಡೋಣ,ಆಮೇಲೆ ಬೇರೆ ಯಾರಾದರೂ ಆ ಇತಿಹಾಸವನ್ನು ಬರೆಯುತ್ತಾರೆ’ ಇದು ಸೇನಾಧಿಕಾರಿಯೊಬ್ಬರು ತಮ್ಮ ಸೈನ್ಯದ ಇತಿಹಾಸ ಬರೆದಿಡಬೇಕಲ್ಲವೇ ಎಂದಾಗ ಆ ಸೇನೆಯ ಮುಖ್ಯಸ್ಥ ತಕ್ಷಣಕ್ಕೆ ಹೇಳಿದ ನೇರನುಡಿಗಳಿವು.
ಅಕ್ಷರಶಃ ಆ ಮಾತುಗಳಿಗೆ ಕೃತಿರೂಪ ಕೊಟ್ಟು ದೇಶಕ್ಕಾಗಿ, ಮುಂದಿನ ಪೀಳಿಗೆಯ ಒಳಿತಿಗಾಗಿ ಬಾಳಿ-ಬದುಕಿ ಬಲಿದಾನಗೈದು ಇತಿಹಾಸ ನಿರ್ಮಿಸಿದ ಆ ಸೇನೆಯ ಮುಖ್ಯಸ್ಥರು ಬೇರೆ ಯಾರು ಅಲ್ಲ ವೀರ ಸೇನಾನಿ ಸುಭಾಷ ಚಂದ್ರ ಬೋಸ್, ಅವರ ಜನ್ಮದಿನ ಇಂದು.
ಅತಿಹೆಚ್ಚು ಪ್ರತಿಕೂಲತೆಗಳ ನಡುವೆಯೂ ಪ್ರಖರ ಧ್ಯೇಯನಿಷ್ಠೆ,ನಿಶ್ಚಲ ದೂರದೃಷ್ಟಿ, ಯೋಜನೆಳನ್ನು ಕಾರ್ಯಗತಗೊಳಿಸುವ ಛಾತಿಗಳೂ ಇದ್ದಲ್ಲಿ ಎಂಥ ಉನ್ನತ ನಾಯಕತ್ವ ರೂಪುಗೊಳ್ಳಬಲ್ಲದು ಎಂಬುದಕ್ಕೆ ಅವರ ಬದುಕು ಒಂದು ಅದ್ಭುತ ನಿದರ್ಶನ.

ಕಾಂಗ್ರೆಸ್ ನ ಶಾಂತಿಯೆಂಬ ನಿಂತ ನೀರಿನಲ್ಲಿ ಕ್ರಾಂತಿಯೆಂಬ ಲಾವಾರಸವನ್ನೇ ಉಕ್ಕಿಸಿ ಬ್ರಿಟಿಷರ ಗುಂಡಿಗೆ ನಡುಗಿಸಿ ದೇಶವನ್ನು ಸ್ವತಂತ್ರದ ಸಾಮಿಪ್ಯಕ್ಕೆ ತಂದು ನಿಲ್ಲಿಸಿದ್ದು ಬೋಸರೆ ಹೊರತು ಸ್ವತಂತ್ರಾನಂತರ ಹೀರೋಗಳಾದ,ಗಾಂಧೀಜಿ ಹೆಸರಿನ ಮೇಲೆ ರಾಜಕೀಯ ಲಾಭ ಪಡೆದವರಲ್ಲ.
ಈ ಮಾತನ್ನು ಯಾರೋ ಭಾರತೀಯರೋ ,INA ಸೈನಿಕರೋ ಅಥವಾ ಸಂಘಪರಿವಾರಗಳೋ ಹೇಳಿದ್ದಿದ್ದರೆ ಅದೆಂತಹ ವಿವಾದಗಳು ಸೃಷ್ಟಿಯಾಗುತ್ತಿತ್ತೋ ಗೊತ್ತಿಲ್ಲ.
ಆದರೆ ಭಾರತ ಸ್ವತಂತ್ರ ಪಡೆದುಕೊಂಡಾಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆ್ಯಟ್ಲಿ ಭಾರತಕ್ಕೆ ಬಂದಿದ್ದಾಗ, ಕಲ್ಕತ್ತೆಯ ಹೈಕೋರ್ಟ್ ಮುಖ್ಯ ನ್ಯಾಯಾದೀಶರು ಮತ್ತು ಬಂಗಾಳದ ಗವರ್ನರ್ ಆಗಿದ್ದ ಪಿ.ಬಿ.ಚಕ್ರವರ್ತಿಗಳು ಅವರನ್ನು ಬೇಟಿ ಮಾಡಿದ ಸಂದರ್ಭದಲ್ಲಿ ಆ್ಯಟ್ಲಿಯವರನ್ನು ‘ 1942ರ ಕ್ವಿಟ್ ಇಂಡಿಯಾ ಚಳುವಳಿ ಅಷ್ಟಾಗಿ ಯಶಸ್ವಿ ಆಗದಿದ್ದರೂ ನೀವು ಭಾರತವನ್ನು ಅಷ್ಟೊಂದು ತರಾತುರಿಯಲ್ಲಿ ಬಿಟ್ಟುಹೋಗಲು ಕಾರಣವೇನು’ ಅಂತ ಕೇಳಿದಾಗ ಆ್ಯಟ್ಲಿ ಅವರು ತಕ್ಷಣಕ್ಕೆ ಹೇಳಿದ್ದು ಸುಭಾಷ್ ಚಂದ್ರ ಬೋಸರ ಸೇನಾ ಕಾರ್ಯಸರಣಿ ಅಂತ.
ಆದರೆ ವಿಪರ್ಯಾಸ ಅಂದರೆ ಅಂತಹ ಮಹಾನ್ ವ್ಯಕ್ತಿಯನ್ನು ಬದುಕಿದ್ದಾಗಲೂ ಮತ್ತು ಕಣ್ಮರೆಯಾದ ನಂತರವೂ ವಿವಾದಳಿಗೆ ಆಹಾರ ಮಾಡಿದ್ದು.
ಜೀವಿತಾವಧಿಯಲ್ಲಿ ಬರೊಬ್ಬರಿ 11 ಬಾರಿ ಸೆರೆಮನೆಯ ಆತಿಥ್ಯ ಸ್ವೀಕರಿಸಿ,ಹೆಚ್ಚುಕಡಿಮೆ ಏಳೆಂಟು ವರ್ಷಗಳ ಕಾಲ ಜೈಲನ್ನೇ ಮನೆಯಾಗಿಸಿಕೊಂಡು ಅಲ್ಲಿಯೂ ಅಮರಣಾಂತ ಉಪವಾಸ,ಪ್ರತಿಭಟನೆ,ಪಾಠ-ಪ್ರವಚನಗಳನ್ನು ಮಾಡಿದಷ್ಟೇ ಅಲ್ಲ ‘ದಿ ಇಂಡಿಯನ್ ಸ್ಟ್ರಗಲ್’ ಅನ್ನುವ ಗ್ರಂಥ ರಚನೆಯ ಆರಂಭವಾದದ್ದು ಅವರು ಜೈಲಿನಲ್ಲಿದ್ದಾಗಲೇ.
ದೇಶದ ಕೆಲಸ ಮಾಡಲೇಬೇಕು ಅಂತ ಸಂಕಲ್ಪಿಸಿದ್ದಾಗ ದೇಶಭಕ್ತನಿಗೆ ಮನೆಯಾದರೇನು ಜೈಲಾದರೇನೂ ಉದ್ದೇಶ ಮಾತ್ರ ಮಾತೆಯ ವಿಮೂಚನೆಯಷ್ಟೆ ಅಲ್ಲವೇ.

ಅದೊಂದು ಅಪರೂಪದ ವ್ಯಕ್ತಿತ್ವ,ಯಾಕೇ ಗೊತ್ತೇ ಬೋಸರಂತೆ ಒಬ್ಬನೆ ವ್ಯಕ್ತಿಯಲ್ಲಿ ಆಧ್ಯಾತ್ಮ,ಜ್ಞಾನ ಮತ್ತು ಕ್ಷಾತ್ರತ್ವ(ಸೈನಿಕ ಮಾನಸಿಕತೆ)ಗಳ ಸಮ್ಮಿಳಿತವಾಗಿ ಕಾಣಸಿಗುವುದು ತುಂಬ ವಿರಳ. ಬಾಲ್ಯದಲ್ಲಿಯೇ ನೆಲದ ಮೇಲೆ ಮಲಗುತ್ತಿದ್ದ ಬಾಲಕ ಸುಭಾಷರಿಗೆ ಯಾರಾದರೂ ಹಾಸಿಗೆ ಮೇಲೆ ಮಲಗು ಅಂತ ಹೇಳಿದರೆ ಹಿಂದೆ ನಮ್ಮ ಋಷಿಮುನಿಗಳೇನು ಮೆತ್ತನೆ ಹಾಸಿಗೆಯ ಮೇಲೆ ಮಲಗುತ್ತಿದ್ದರೇ?
ಅವರು ಹೀಗೆ ಅಲ್ಲವೇ ಮಲಗುತ್ತಿದ್ದದ್ದು ಅಂತ ಬಾಯಿಮುಚ್ಚಿಸುತ್ತಿದ್ದ.
17ನೇ ವಯಸ್ಸಿನಲ್ಲಿಯೇ ಕಣ್ಮರೆಯಾಗಿ ತೀರ್ಥಯಾತ್ರೆಗೆ ಹೊರಟು ವಾರಣಾಸಿ, ಹೃಷಿಕೇಶ,ಮಥುರಾ,ಗಯಾ,ವೃಂದಾವನಗಳಿಗೆ ತೆರಳಿ ಆಧ್ಯಾತ್ಮಿಕ ಹಸಿವು ನೀಗಿಸಿಕೊಳ್ಳುಲು ಗುರುವನ್ನು ಹುಡುಕುವ ವಿಫಲ ಪ್ರಯತ್ನ ಮಾಡಿದ.
ಶಾಲೆಯಲ್ಲಿ ಅವನ ಪ್ರತಿಭೆಯನ್ನು ಗುರುತಿಸಿ,ಪೋಷಣೆ ಮಾಡಿ,ಪ್ರಕೃತಿಯ ಬಗ್ಗೆ ಶ್ರದ್ಧೆ-ಭಕ್ತಿಗಳನ್ನು ಮತ್ತು ನೈತಿಕತೆಯನ್ನು ಬಿತ್ತಿದ್ದು ಶ್ರೀ ಬೇಣಿಮಾಧವರು ಅನ್ನುವ ಅವರ ನೆಚ್ಚಿನ ಗುರುಗಳು.
ಹದಿನೈದನೆಯ ವಯಸ್ಸಿನಲ್ಲಿ ಸುಭಾಷರ ವ್ಯಕ್ತಿತ್ವದ ಮೇಲೆ ಆಘಾದವಾದ,ಕ್ರಾಂತಿಕಾರಕ ಪ್ರಭಾವ ಬೀರಿ ಅವರ ಚಿಂತನಶೈಲಿಯನ್ನೇ ಬದಲಿಸಿ ಇಡೀ ಜೀವನ ರಾಷ್ಟ್ರಕಾರ್ಯಕ್ಕೆ ಸಮರ್ಪಣೆ ಮಾಡಲು ಪ್ರೇರಣೆ ನೀಡಿದ್ದು ಸ್ವಾಮಿ ವಿವೇಕಾನಂದರ ಸಾಹಿತ್ಯಗಳು ಬಹಳ ಮುಖ್ಯವಾಗಿ ‘ಕೊಲಂಬೋದಿಂದ ಅಲ್ಮೋರಕೆ’ ಅನ್ನುವ ಉಪನ್ಯಾಸ ಮಾಲಿಕೆ.

ತಂದೆ ಜಾನಕೀನಾಥರು ನಿನ್ನ ಕೈಯಿಂದ ICS ಮಾಡಲು ಸಾಧ್ಯವಿಲ್ಲ ಅಂತ ಪರೋಕ್ಷವಾಗಿ ಅದನ್ನು ಸಾಧಿಸಲು ಸವಾಲು ಹಾಕಿದಾಗ, ಒಲ್ಲದ ಮನಸ್ಸಿನಿಂದ ತಂದೆಯ ಮಾತಿಗೆ ಕಟ್ಟಿಬಿದ್ದು ಇಂಗ್ಲೆಂಡ್ಲಿಗೆ ಹೋಗಿ ಭಾರತೀಯರಿಗೆ ಕಬ್ಬಿಣದ ಕಡಲೆಯಾಗಿದ್ದ ಆ ಪರೀಕ್ಷೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅಧ್ಯಯನ ಮಾಡಿ ನಾಲ್ಕನೇ ಸ್ಥಾನ ಪಡೆದು ಪಾಸು ಮಾಡಿದ್ದು ಕಡಿಮೆ ಸಾಧನಯೇನಲ್ಲ.
ಆದರೆ ಮುಂದುವರೆದು ಬ್ರಿಟಿಷರ ಕೈಕೆಳಗೆ ಕೆಲಸ ಮಾಡಲು ಇಷ್ಟವಿರದ ಕಾರಣ ಸರ್ಕಾರದ ಗುಲಾಮಿ ಕೆಲಸಕ್ಕೆ ಹಾಜರಾಗಲಿಲ್ಲ.
ಅಲ್ಲಿಂದ ಭಾರತಕ್ಕೆ ಬಂದು ಸ್ವತಂತ್ರ ಹೋರಾಟಲ್ಲಿ ಭಾಗವಹಿಸುವ ಅದಮ್ಯ ಆಸೆಯಿಂದ ಗಾಂಧೀಜಿನ್ನು ಬೇಟಿಮಾಡಿದರು ಆದರೆ ಇವರು ನಿರೀಕ್ಷಿಸಿದ್ದ ಕ್ರಾಂತಿಕಾರಕ ವಿಚಾರ ಮತ್ತು ಯೋಜನೆಗಳು ಅವರ ಬಳಿ ಸಿಗದೇ ಇದ್ದಾಗ,ಸ್ವತಃ ಗಾಂಧಿಯವರು ಸೂಚನೆಯಂತೆ ಚಿತ್ತರಂಜನ್ ದಾಸರನ್ನು ಬೇಟಿಗೆ ಹೋಗಿ ಅಲ್ಲಿ ಅವರು ಅರಸುತ್ತಿದ್ದ ಮಾರ್ಗದರ್ಶಕ ಸಿಕ್ಕ ಅನುಭವವಾಯಿತು.ಮುಂದೆ ದಾಸರ ನ್ಯಾಷನಲ್ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಮಾಡಿದ್ದು,ನಂತರದಲ್ಲಿ 1921ರಲ್ಲಿ ಇಂಗ್ಲೆಂಡ್ ರಾಜಕುಮಾರ ಭಾರತಕ್ಕೆ ಬಂದಾಗ ಅವನ ಪ್ರತಿಭಟನೆ ಮಾಡಿದ ಕಾರಣಕ್ಕಾಗಿ ಮೊದಲ ಬಾರಿಗೆ ಜೈಲಿನ ರುಚಿ ನೋಡಬೇಕಾದ ಸಂದರ್ಭ ಒದಗಿ ಬಂತು.
ಸ್ವರಾಜ್ಯ ಪಕ್ಷ ಸ್ಥಾಪಸಿದ ದಾಸರು ಕಲ್ಕತ್ತಾದ ಮೇಯರ್ ಆದಾಗ ಅವರ ಮುಖ್ಯಾಧಿಕಾರಿಯಾಗಿ ಸೇವೆ,ಪಾರ್ವರ್ಡ ಪತ್ರಿಕೆಯ ಸಂಪಾದಕನಾಗಿಯೂ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮತ್ತೊಮ್ಮೆ ಜೈಲುಪಾಲಾದ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಬೇಕಾಗಿಯಿತು.ಅಲ್ಲಿ ಅವರು ಕೇವಲ
ತಾವು ಮಾತ್ರ ಅನಾರೋಗ್ಯದಿಂದ ಮುಕ್ತಿ ಪಡೆಯುವ ವಿಚಾರವನ್ನಷ್ಟೇ ಮಾಡದೆ,ದೇಶವನ್ನು ಕೂಡ ಆಗ ಹಿಡಿದಿದ್ದ ಗುಲಾಮಗಿರಿಯ ಅನಾರೋಗ್ಯದಿಂದ ವಿಮುಕ್ತ ಮಾಡುವುದಕ್ಕಾಗಿ ಶ್ರಮಿಸಿದ್ದು ನಿಜಕ್ಕೂ ಪ್ರೇರಣಾದಾಯಿ. ಸ್ವತಂತ್ರಪ್ರಾಪ್ತಿಗಾಗಿ ಅನೇಕ ದೇಶಗಳ ಮುಖಂಡರನ್ನು,ಅಲ್ಲಿ ನೆಲೆಸಿದ್ದ ಭಾರತೀಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದರು.ಅದರಲ್ಲಿ ಮುಖ್ಯವಾಗಿ ಸರ್ದಾರ್ ಪಟೇಲರ ಅಣ್ಣ ವಿಠ್ಠಲಬಾಯ್ ಪಟೇಲ ಅವರು,ಅವರ ಸೇವೆ ಮಾಡಿ,ಪ್ರೇರಣೆ ಪಡೆದು ಅವರ ಪ್ರೀತಿಪಾತ್ರರಾದರು.ವಾಪಸ್ ಭಾರತಕ್ಕೆ ಬಂದ ನಂತರ ಸ್ವತಂತ್ರ ಹೋರಾಟಕ್ಕೆ ಮತ್ತಷ್ಟು ವೇಗ ಕೊಡುವ ಪ್ರಯತ್ನ.
ಗಾಂಧೀಜಿ ಸೂಚಿಸಿದ ವ್ಯಕ್ತಿಯೇ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದ ಸಮಯದಲ್ಲಿ
ಬೋಸರು ಕೇವಲ ತಮ್ಮ ಸಾಮರ್ಥ್ಯ ಮತ್ತು ಜನಪ್ರಿಯತೆಗಳನ್ನು ಅನಿವಾರ್ಯವಾಗಿ ಸ್ವತಃ ಗಾಂಧಿಯವರೂ ಒಪ್ಪಲೇಬೇಕಾಗಿದ್ದರಿಂದ 1938ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.
ಆ ಅಧ್ಯಕ್ಷ ಗಾದಿಯೋ ಹೂವಿನ ಹಾಸಿಗೆಯಂತು ಆಗಿರಲಿಲ್ಲ, ಬದಲಾಗಿ ಅಕ್ಷರಶಃ ಮುಳ್ಳಿನ ಹಾಸಿಗೆಯಾಗಿತ್ತು.ಹೇಗೋ ಎಲ್ಲ ಗೊಂದಲಗಳನ್ನು ಸಮರ್ಥವಾಗಿ ಎದುರಿಸಿ ಇನ್ನೇನು ಕೆಲ ಕ್ರಾಂತಿಕಾರಕ ಬದಲಾವಣೆಗಳನ್ನು ತರಬೇಕೆನ್ನುವಷ್ಟರಲ್ಲಿ ಒಂದು ವರ್ಷದ ಅವಧಿ ಮುಗಿದರೂ,ಮತ್ತೊಮ್ಮೆ ಆಯ್ಕೆಯಾಗಿ ಇನ್ನಷ್ಟು ಹೆಚ್ಚಿನ ಉತ್ಸಾಹ ಮತ್ತು ವಿಶ್ವಾಸದಿಂದ ಕೆಲಸ ಮಾಡಬೇಕೆಂದು ಎರಡನೆ ಬಾರಿ ಸ್ಪರ್ಧೆಸಿದರು.
ಮೊದಲೆ ಗಾಂಧೀಜಿ ಮತ್ತು ಅವರ ಕೆಲ ಅನುಯಾಯಿಗಳ ಅವಕೃಪೆ,ವಿರೋಧಗಳ ನಡುವೆಯೂ 1939ರಲ್ಲಿ ಪಟ್ಟಾಭಿ ಸೀತಾರಾಂರ ವಿರುದ್ಧ ರೋಚಕವಾಗಿ ಗೆದ್ದು ಗದ್ದುಗೆಯೇರಿದ್ದು ಬೋಸರ ಜನಪ್ರಿಯತೆ ಮತ್ತು ಸಾಮರ್ಥ್ಯಗಳನ್ನು ಮತ್ತೊಮ್ಮೆ ಭಾರತ ಒಪ್ಪಿ ಅಪ್ಪಿಕೊಂಡಂತಿತ್ತು.
ಆದರೆ ಈ ಬಾರಿ ಮಾತ್ರ ಶತಾಯಗತಾಯ ಬೋಸರನ್ನು ಕೆಳಗಿಸುವುದಕ್ಕಾಗಿ ಆ ಗುಂಪು ಒಂದಿಲ್ಲೊಂದು ಬಗೆಯ ಕಿರುಕುಳ ನೀಡುತ್ತ ಬಂತು.ಬೋಸರು ಚುನಾವಣೆಯಲ್ಲಿ ಗೆದ್ದರೂ ಮುಂದಿನ ದಿನಗಳಲ್ಲಿ ಅವರ ಷಡ್ಯಂತ್ರ ಮತ್ತು ಅಸಹಕಾರದ ಮುಂದೆ ಸೋಲಬೇಕಾಯಿತು.
ಅದು 1939ರ ಮಾರ್ಚ 6ರಂದು ತ್ರಿಪರಿಯಲ್ಲಿ ಕಾಂಗ್ರೆಸ್ ಸಭೆ ನಿಶ್ಚಯವಾಗಿತ್ತು,ಆಗ ಅದೆಂಥ ಅಗ್ನಿಪರೀಕ್ಷೆ ಎದುರಾಯಿತೆಂದರೆ,ಒಂದೆಡೆ ಎಲ್ಲ ಕಾರ್ಯಕಾರಿ ಸದಸ್ಯರು ರಾಜೀನಾಮೆ ಕೊಟ್ಟು ಅವಿಶ್ವಾಸ ತೋರಿಸುವ ಎಚ್ಚರಿಕೆ,ಮತ್ತೊಂದೆಡೆ ತೀವ್ರ ಅನಾರೋಗ್ಯ.ನ್ಯುಮೋನಿಯಾ ಮತ್ತು ಕರಳುಬೇನೆಯಿಂದ ಬೋಸರು ತತ್ತರಿಸಿ ನಡೆಯುವುದಕ್ಕೂ ಕಷ್ಟಸಾಧ್ಯವಾಗಿತ್ತು,ಅಂತದ್ದರಲ್ಲಿ ಇನ್ನು ಸಭೆಗೆ ಹಾಜರಾಗುವುದಂತೂ ಊಹೆಗೆ ನಿಲುಕದ್ದು.ಆ ಕಠಿಣ ಸಂದರ್ಭದಲ್ಲಿ ಒಂದೋ ಸುಭಾಷರು ರಾಜಿನಾಮೆ ನೀಡಬೇಕು ಅಥವಾ ಕಾಂಗ್ರೆಸಿಗರು ಆ ಸಭೆ ಮುಂದೂಡಬೇಕು.ಆದರೆ ಅವರ ಕಾಂಗ್ರೆಸಿಗರ ಶಾಂತಿಯ ಕಿವಿಗಳಿಗೆ ಈ ಕ್ರಾಂತಿಕಾರಿಯ ವೇದನೆ ಕೇಳಲೇ ಇಲ್ಲವಲ್ಲ.
ಬೋಸರು ಅಂಬುಲೆನ್ಸ ಕಾರಿನಲ್ಲಿ ಬಂದು,ಗಾಲಿಕುರ್ಚಿಯಲ್ಲೇ ಕುಳಿತು ಸಭೆಗೆ ಹಾಜರಾಗಿ,ಜರ್ಝರಿತರಾಗಿದ್ದರೂ ಪ್ರಾಣವನ್ನು ಲೆಕ್ಕಿಸದೆ ದೇಶಭಕ್ತಿ ಮೆರದದ್ದು ಹೇಗೆ ಈ ದೇಶ ಮರೆಯಲಿಕ್ಕೆ ಸಾಧ್ಯವಾದೀತು.
ಸುಭಾಷರು ಮಾತ್ರ ಶಾಂತಿದೂತರ ಎಲ್ಲ ತಡೆಗೋಡೆಗಳನ್ನು ದಾಟಿ ಹೊರಬಂದು ರಾಜಿನಾಮೆಯಿತ್ತರು.
ಅಲ್ಲಿಗೆ ಅವರ ಕಾಂಗ್ರೆಸ್ ಜೀವನ ಮುಕ್ತಾಯವಾಗಿ ಸ್ವತಂತ್ರ,ಸಶಸ್ತ್ರ,ಸೇನಾ ಜೀವನ ಆರಂಭವಾಯಿತು.
ದೇಶದ ಉದ್ದಗಲಗಳಲ್ಲಿ ಮಿಂಚಿನಂತೆ ಸಂಚರಿಸಿ ಬಿಸಿರಕ್ತದ ತರುಣರನ್ನು ಬಡಿದೆಬ್ಬಿಸಿದರು ‘ಫಾರ್ವರ್ಡ್ ಬ್ಲಾಕ್’ ಹೆಸರಿನಲ್ಲಿ.
ಮತ್ತೆ ಅವರನ್ನು ಬಂಧಿಸಿ ಜೈಲಿನಲಿಟ್ಟಾಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿ ಆರೋಗ್ಯ ಕೆಟ್ಟಿದ್ದಕ್ಕಾಗಿ,ಜೈಲಿನಿಂದ ಬಿಡುಗಡೆಗೊಳಿಸಿ ಗೃಹಬಂಧನಲ್ಲಿ ಇರಿಸಬೇಕಾದ ಅನಿವಾರ್ಯತೆ ಬ್ರಿಟಿಷರದ್ದು.

ಅದಾದ ನಂತರ ಬೋಸರು ಸಂಪೂರ್ಣ ಅಂತರ್ಮುಖಿಯಾಗಿ,ಮೌನಿಯಾಗಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗುತ್ತಾರೆ.ಅದನ್ನು ನೋಡಿದ ಎಲ್ಲರೂ ಅವರು ಕೂಡ ಅರವಿಂದರಂತೆ ಕ್ರಾಂತಿಕೆಲಸ ಬಿಟ್ಟು ಸನ್ಯಾಸಿಯಾಗುತ್ತಾರೆ ಎಂದು ಭಾವಿಸಿದ್ದರು.ಆದರೆ ಹುಲಿ ಹೇಗೆ ಭೇಟೆಯಾಡುವಾಗ ಒಂದು ಹಜ್ಜೆ ಹಿಂದೆ ಸರಿದು ಶಕ್ತಿ ಹೆಚ್ಚಿಸಿಕೊಂಡು ಗುರಿಯತ್ತ ಮುನ್ನುಗ್ಗಿ ಶಿಕಾರಿ ಮಾಡುತ್ತದೊ ಅದೇ ರೀತಿ ಬೋಸರು ಸುಮ್ಮನಿದ್ದು ಶಿವಾಜಿ ಔರಂಗಜೇಬನಿಂದ ತಪ್ಪಿಸಿಕೊಂಡ ಪ್ರೇರಣೆಯಿಂದ,ಪೋಲಿಸರ ಸರ್ಪಗಾವಲು ಭೇದಿಸಿ ಪರಾರಿಯಾಗುತ್ತಾರೆ.ಮುಂದೆ ‘ಜಿಯಾವುದ್ದಿನ’ ಎಂಬ ಮುಸ್ಲಿಂ ವೇಶದಲ್ಲಿ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪೇಷಾವರ ತಲುಪುತ್ತಾರೆ.ಆದರೆ ರಷ್ಯ ಜರ್ಮನಿಯಿಂದ ನಿರೀಕ್ಷಿತ ಸಹಕಾರ ಸಿಗದಿದ್ದಾಗ ಇಟಲಿಯ ಮುಸೊಲಿನಿಯ ಸ್ನೇಹ ಬಳಸಿಕೊಂಡು ‘ಆರ್ಲೆಂಡ್ ಮೆಟ್ಸನಿ’ ಹೆಸರಿನ ಇಟಲಿ ಪಾಸ್ಪೋರ್ಟ್ ಪಡೆದು ಜರ್ಮನಿ ತಲುಪಿದ ನಂತರ ನಡೆದದ್ದು ಮಾತ್ರ ಎಲ್ಲರ ಕಲ್ಪನೆಗೂ ಮೀರಿದ್ದ ಯಶೋಗಾಥೆ.
ಶತ್ರುವಿನ ಶತ್ರುಗಳ ಮಿತ್ರತ್ವ ಸಂಪಾದಿಸುವ ನಿಪುಣ ಕೆಲಸಕ್ಕೆ ಕೈಹಾಕಿದ ಬೋಸರು ಜರ್ಮನಿಯ ಹಿಟ್ಲರ್, ಇಟಲಿಯ ಮುಸೊಲಿನಿ, ಐರ್ಲೆಂಡಿನ ಡಿ ವೆಲೇರ ಸಹಕಾರ,ಜಪಾನ್ ಯುಗೊಸ್ಲಾವಿಯ ಇನ್ನಿತರ ದೇಶಗಳ ಸ್ನೇಹ ಗಳಿಸಿದರು.

ಅದರಿಂದ ಅವರು ಮಾಡಿದ ಕೆಲಸ ಗೊತ್ತೇನು? ಭಾರತದಲ್ಲಿಯೇ ಭಾರತೀಯರ ಸೈನ್ಯ ಕಟ್ಟುವುದು ಕಷ್ಟಸಾಧ್ಯವಾಗಿದ್ದ ಕಾಲದಲ್ಲಿ ವಿದೇಶಿ ನೆಲದಲ್ಲಿ, ವಿದೇಶಿಯರ ಸಹಾಯದಿಂದ,ಭಾರತೀಯ ಮೂಲದ ಯುದ್ಧಖೈದಿಗಳನ್ನು ಸೇರಿಸಿಕೊಂಡು, ಭಾರತದ ಸ್ವತಂತ್ರಕ್ಕಾಗಿ ಸೈನ್ಯ ಕಟ್ಟಿದ್ದು.
ಆ ಸೈನ್ನವೇ ಮುಂದೆ ಬ್ರಿಟೀಷರ ನಿದ್ದೆ ಕದ್ದು ಸಿಂಹಸ್ವಪ್ನವಾಗಿ ಕಾಡಿದ್ದು.ಅದರ ಹೆಸರೇ ‘ಇಂಡಿಯನ್ ನ್ಯಾಷನಲ್ ಆರ್ಮಿ’.
ಆ ಸೈನ್ಯದ ಸೈನಿಕರೇ ಮುಂದೆ ಸುಭಾಷ್ ಚಂದ್ರ ಬೋಸ್ ಅವರನ್ನು ಆದರಪೂರ್ವಕವಾಗಿ ‘ನೇತಾಜಿ’ ಅಂತ ಕರೆದಿದ್ದು.ಅಲ್ಲಿಂದಲೇ ಹುಟ್ಟಿದ್ದು ಜೈ ಹಿಂದ್ ಮತ್ತು ಚಲೋ ದಿಲ್ಲಿ ಘೋಷಣೆಗಳು.
ಆಗಲೇ ನೇತಾಜಿ ಭಾರತದ ಸ್ವತಂತ್ರ ಸರ್ಕಾರ,ಕರೆನ್ಸಿ,ಸ್ಟಾಂಪ್,ಧ್ವಜಗಳನ್ನು ಘೋಷಣೆ ಮಾಡಿದ್ದು.ಬಾನುಲಿ ಕೇಂದ್ರವನ್ನು ಆರಂಭಿಸಿ ಅಲ್ಲಿಂದಲೇ ಭಾರತೀಯರಿಗೆ ಸೇನೆಯ ಕಾರ್ಯದ ಬಗ್ಗೆ ಮಾಹಿತಿ ಕೊಟ್ಟು ಸಂಚಲನವನ್ನುಂಟು ಮಾಡಿದರು.

ಒಬ್ಬ ಸೇನೆಯ ಮುಖ್ಯಸ್ಥನಾಗಿ ಯಾವುದೇ ಪ್ರತಿಫಲಾಪೇಕ್ಷ ಇಲ್ಲದೆ ಕೆಲಸ ಮಾಡುವ ಸೈನಿಕರ ಸೇರ್ಪಡೆ,ಅವರಿಗೆ ಪ್ರಶಿಕ್ಷಣ ಕೊಟ್ಟು ಹುರಿದುಂಬಿಸುವುದು,ಯುದ್ಧ ಸಾಮಗ್ರಿಗಳು ಮತ್ತು ಬದುಕಲು ಬೇಕಾಗಿರುವ ವಸ್ತುಗಳ ಜೋಡಣೆ,ಇದರ ಜೊತೆಗೆ ಯುದ್ಧ ತಂತ್ರ ರೂಪಿಸುವುದು ಮಿತ್ರ ದೇಶಗಳ ವಿಶ್ವಾಸ ಉಳಿಸಿಕೊಳ್ಳುವುದು.ಈ ಎಲ್ಲವನ್ನೂ ಅವರು ಏಕಕಾಲದಲ್ಲಿ ಮಾಡಬೇಕಾಗಿತ್ತು ಮತ್ತು ಅದರಲ್ಲಿ ಯಶಸ್ವಿಯೂ ಕೂಡ ಆದರು.
ಅವರು ಸೈನಿಕರನ್ನು ಕುರಿತು ಮಾತನಾಡುತ್ತ ಹೇಳುತ್ತಾರೆ “ಬಿಸಿಲಾಗಲಿ ಮಳೆಯಾಗಲಿ,ಸುಖ-ದುಃಖವಿರಲಿ,ನಾನು ನಿಮ್ಮೊಟ್ಟಿಗಿರುತ್ತೇನೆ, ಸಧ್ಯಕ್ಕೆ ನಾನು ನಿಮಗೆ ನೀಡಬಹುದಾದದ್ದು ಹಸಿವು,ಬಾಯಾರಿಕೆ,ನಿರ್ಧನತೆ,ಬಲವಂತದ ಪರೇಡ್,ಬಹುಶಃ ಸಾವು ಇದನ್ನು ಮಾತ್ರ”
ಈ ಸಾಲುಗಳನ್ನು ನೋಡಿದಾಗ ನಾವು ಅಂದಾಜಿಸಬಹುದು ಯಾವ ಮಾನಸಿಕತೆಯ ಸೈನಿಕರು ತಯಾರಾಗಿರಹುದೆಂದು.

ಮುಂದೆ 1944ರ ಜನೇವರಿಯಲ್ಲಿ ನೇತಾಜಿ ಸೇನೆ ಜಪಾನ ಸೈನ್ಯದೊಟ್ಟಿಗೆ ಭಾರತ ಬರ್ಮಾ ಗಡಿ ತಲುಪಿ ಬ್ರಿಟಿಶ ಸೈನ್ಯದ ವಿರುದ್ಧ ಯುದ್ಧ ಮಾಡಿ ಕೊಹಿಮಾವನ್ನು ಗೆದ್ದು ಬೀಗಿತು.
ಶತ್ರುಸೇನೆಗೆ ಹೋಲಿಸಿದರೆ ದೇಶಭಕ್ತಿ ಮತ್ತು ಆತ್ಮ ಸ್ಥೈರ್ಯಗಳನ್ನು ಬಿಟ್ಟು ಇನ್ಯಾವುದಕ್ಕೂ ಸರಿಸಾಟಿಯಿಲ್ಲದ್ದು INA.
ಅದರಿಂದಾಗಿ ಕೆಲವರು ಆಹಾರವಿಲ್ಲದೆ,ಕೆಲವರು ಗಾಯಗೊಂಡು ಚಿಕಿತ್ಸೆಯಿಲ್ಲದೆ,ಇನ್ನೂ ಹಲವರು ಪ್ರಕೃತಿಯ ಪ್ರತಿಕೂಲತೆಯಿಂದ ಮಾತೃಭೂಮಿಯ ಸ್ವತಂತ್ರಕ್ಕಾಗಿ ಪ್ರಾಣ ಬಿಟ್ಟರು.ಅಕ್ಷರಶಃ ಮಾತೆಗೆ ರಕ್ತದಭಿಷೇಕ ಮಾಡಿದರು,ಹೀಗಾಗಿ ಯರೋ ಕೆಲವರು ಊಟ ಬಿಟ್ಟದ್ದರಿಂದ ಮಾತ್ರಕ್ಕೆ ಬರಲಿಲ್ಲ ಸ್ವತಂತ್ರ, ನೇತಾಜಿಯಂತವರು ರಕ್ತ ಕೊಟ್ಟಿದ್ದಿದೆ!

ಡಾ.ಮಲ್ಲಿಕಾರ್ಜುನ ಬಾಳಿಕಾಯಿ.ಹುಬ್ಬಳ್ಳಿ